ಮೀರತ್ (ಉತ್ತರ ಪ್ರದೇಶ): ಹಿಂದಿ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ಗಮನ ಸೆಳೆದ ನಟಿ ಮತ್ತು ರೂಪದರ್ಶಿ ಅರ್ಚನಾ ಗೌತಮ್ ಅವರು ಈಟಿವಿ ಭಾರತದೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾದ ತಮ್ಮ ಅನುಭವ ಹಂಚಿಕೊಂಡರು. ವೃತ್ತಿಗೆ ಸಂಬಂಧಿಸಿದಂತೆ ತಮ್ಮ ಯೋಜನೆಗಳ ಜೊತೆಗೆ ರಾಜಕೀಯ ಎಂಟ್ರಿ ಬಗ್ಗೆಯೂ ಮುಕ್ತವಾಗಿ ಮಾತನಾಡಿದರು. ಸಾರ್ವಜನಿಕರಿಂದ ದೊರೆತ ಪ್ರೀತಿ, ಅಭಿಮಾನ ಹಾಗು ಚಿತ್ರರಂಗದಲ್ಲಿ ಬದುಕು ಕಟ್ಟಿಕೊಳ್ಳುವ ವಿಚಾರವನ್ನು ಹೇಳಿದರು.
ಅರ್ಚನಾ ಗೌತಮ್ ಉತ್ತರಪ್ರದೇಶದ ಮೀರತ್‌ನವರು. ಬಿಗ್‌ಬಾಸ್ ಟಾಪ್ 5 ಸ್ಪರ್ಧಿಗಳಲ್ಲಿ ಓರ್ವರಾಗಿ ಇವರು ಹೊರಹೊಮ್ಮಿದ್ದಾರೆ. ರಿಯಾಲಿಟಿ ಶೋ ಟ್ರೋಫಿ ಇವರಿಗೆ ದಕ್ಕಲಿಲ್ಲ. ಆದರೂ ತಮ್ಮ ವಿಶಿಷ್ಟ ಸಂಭಾಷಣೆ ಮತ್ತು ಶೈಲಿಯಿಂದ ಮೊದಲ ದಿನದಿಂದ ಕೊನೆಯಯವರೆಗೂ ಚರ್ಚೆಯಲ್ಲಿದ್ದರು. ಶೋನಲ್ಲಿ ಪ್ರಬಲ ಸ್ಪರ್ಧಿಯಾಗಿ ಪೈಪೋಟಿ ನೀಡುತ್ತಿದ್ದರು.
'ರಿಯಾಲಿಟಿ ಶೋ ಬದುಕು ಬದಲಿಸಿತು': ಬಿಗ್ ಬಾಸ್ 16 ಶೋ ನನ್ನ ಬದುಕನ್ನೇ ಬದಲಿಸಿದೆ ಎಂದು ಅವರು ಹೇಳಿದರು. ಶೋಗೆ ಹೋದಾಗ ಒಂದರಿಂದ ಎರಡು ವಾರಗಳಲ್ಲಿ ನಾನು ಹೊರಬರ್ತೀನಿ ಎಂದು ಕೆಲವರು ಟೀಕಿಸಿದ್ದರು. ಆದ್ರೆ ಕೊನೆ ಹಂತದವರೆಗೂ ತಲುಪಿದ್ದೇನೆ. ಅಲ್ಲಿ ಬಹಳಷ್ಟು ವಿಚಾರಗಳನ್ನು ಕಲಿತೆ. ಜೀವನಕ್ಕೊಂದು ದಿಕ್ಕು ಸಿಕ್ತು ಎಂದು ಖುಷಿ ವ್ಯಕ್ತಪಡಿಸಿದರು.
ಈ ರಿಯಾಲಿಟಿ ಶೋನಲ್ಲಿ ನಟನೆ ಇರಲಿಲ್ಲ. ಅಲ್ಲಿ ನಾನು ಮೀರತ್‌ನ ಡೈಲಾಗ್‌ಗಳನ್ನು ಹೇಳಿದ್ದೆ. ಜನರು ಅದೇ ವಿಷಯವನ್ನು ಹೆಚ್ಚು ಇಷ್ಟಪಡ್ತಾರೆ ಎಂದು ನನಗೆ ತಿಳಿದಿರಲಿಲ್ಲ. ಸಾಮಾನ್ಯವಾಗಿ ನಾನು ಮನೆಯಲ್ಲಿರುವ ರೀತಿಯಲ್ಲೇ ಅಲ್ಲೂ ಬದುಕಲು ಪ್ರಯತ್ನಿಸುತ್ತಿದ್ದೆ. ಅದೇ ಕಾರಣಕ್ಕೆ ಮೀರತ್ ಭಾಷೆ ಜನ ಮನ ಸೆಳೆಯಿತು. ಶೋನಲ್ಲಿ ಮೇಕಪ್ ಇಲ್ಲದೇ ಇರುತ್ತಿದ್ದೆ ಎಂದು ಅರ್ಚನಾ ವಿವರಿಸಿದರು.
ಕಾರ್ಯಕ್ರಮದಲ್ಲಿ ತನಗೆ ಯಾವುದೇ ಸ್ಥಾನವಿಲ್ಲದಿದ್ದರೂ ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಅರ್ಚನಾ ತಿಳಿಸಿದರು. ಸಾರ್ವಜನಿಕರು ನಾಯಕ ಮತ್ತು ನಟರಲ್ಲಿ ನೈಜತೆ ನೋಡಲು ಬಯಸುತ್ತಾರೆ. ಅದರಂತೆ ನನ್ನ ಸ್ವಂತಿಕೆಯೇ ನನ್ನನ್ನು ಅಷ್ಟು ಸಮರ್ಥಳನ್ನಾಗಿ ಮಾಡಿದೆ ಎಂದರು. ಇನ್ನೂ ಹಲವಾರು ಪ್ರಾಜೆಕ್ಟ್‌ಗಳ (ಸಿನಿ ಕ್ಷೇತ್ರ) ಕುರಿತು ಮಾತುಕತೆ ನಡೆಸುತ್ತಿದ್ದೇನೆ. ಶೀಘ್ರದಲ್ಲೇ ಅದನ್ನು ಬಹಿರಂಗಪಡಿಸುತ್ತೇನೆ ಎಂದು ಕೂಡ ತಿಳಿಸಿದರು.
'ಪ್ರಿಯಾಂಕಾ ಗಾಂಧಿ ವಿರುದ್ಧ ಒಂದು ಮಾತನ್ನೂ ಕೇಳಲಾರೆ': ಶೋನಲ್ಲಿದ್ದ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬಗ್ಗೆ ಕೆಲವು ಕಾಮೆಂಟ್‌ಗಳನ್ನು ಮಾಡಲಾಗಿತ್ತು. ದೀದಿ ಎಂದು ಕರೆದು ಚುಡಾಯಿಸುವ ಪ್ರಯತ್ನವೂ ನಡೆಯುತ್ತಿತ್ತು. ನನ್ನ ನಾಯಕಿ ವಿರುದ್ಧ ಒಂದೇ ಒಂದು ಮಾತು ಕೇಳಲು ನನಗೆ ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ: ಆಸ್ಕರ್ ರೇಸ್‌ನಲ್ಲಿ 'ಆರ್‌ಆರ್‌ಆರ್': ಬರಿಗಾಲಲ್ಲೇ ಅಮೆರಿಕಕ್ಕೆ ತೆರಳಿದ ರಾಮ್ ಚರಣ್
ರಾಯ್‌ಪುರದಲ್ಲಿ ಕಾಂಗ್ರೆಸ್ ಸಮಾವೇಶ ನಡೆಯುತ್ತಿದೆ. ಫೆಬ್ರವರಿ 25 ರಂದು ಅಲ್ಲಿಗೆ ಭೇಟಿ ಕೊಡಲಿದ್ದೇನೆ. ಪ್ರಿಯಾಂಕಾ ಗಾಂಧಿ ಅವರು ಕರೆ ಮಾಡಿದ್ದಾರೆ. ನಮ್ಮ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಲಿದ್ದೇನೆ. ಕೆಟ್ಟ ಕಾಲದಲ್ಲಿ ದೀದಿ ನನ್ನನ್ನು ಬೆಂಬಲಿಸಿದ್ದಾರೆ. ಎಂದಿಗೂ ಪ್ರಿಯಾಂಕಾರನ್ನು ಬಿಡುವುದಿಲ್ಲ. ಅವರ ಕೈ ಹಿಡಿದು ನಡೆಯುತ್ತೇನೆ ಎಂದು ತಿಳಿಸಿದರು.
2024ರ ಚುನಾವಣೆಗೆ ಸ್ಪರ್ಧಿಸುವಿರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪ್ರಿಯಾಂಕಾ ಗಾಂಧಿ ಅವರು ಬಯಸಿದರೆ ಚುನಾವಣೆಗೆ ಸ್ಪರ್ಧಿಸುವುದು ಖಚಿತ. ಅದಕ್ಕೂ ಮೊದಲು ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನ ಕಂಡುಕೊಳ್ಳಲು ಬಯಸುತ್ತೇನೆ ಎಂದರು ಹೇಳಿದರು.
ಇದನ್ನೂ ಓದಿ: ಎಂಸಿ ಸ್ಟಾನ್ ಮುಡಿಗೇರಿದ 'ಬಿಗ್ ಬಾಸ್ 16' ಕಿರೀಟ: ಶಿವ ಠಾಕ್ರೆ ರನ್ನರ್ ಅಪ್
ಅರ್ಚನಾ ಗೌತಮ್ 2022ರಲ್ಲಿ ಮೀರತ್‌ನ ಹಸ್ತಿನಾಪುರ ವಿಧಾನಸಭೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಪ್ರಿಯಾಂಕಾ ಗಾಂಧಿ ಟಿಕೆಟ್ ನೀಡಿದ್ದರು. 27ರ ಹರೆಯದ ಅರ್ಚನಾ ಗೌತಮ್ ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. 2015ರಲ್ಲಿ ಗ್ರೇಟ್ ಗ್ರ್ಯಾಂಡ್ ಮಸ್ತಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯ. ತಮ್ಮ ಬೋಲ್ಡ್ ಇಮೇಜ್ನಿಂದ ಸಾಕಷ್ಟು ಹೆಸರು ಗಳಿಸಿದ್ದಾರೆ.