ರಾಂಚಿ (ಜಾರ್ಖಂಡ್): ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಅಮೀಶಾ ಪಟೇಲ್ ಅವರು ಶನಿವಾರ ರಾಂಚಿ ಸಿವಿಲ್ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸಿದ ಹಿರಿಯ ವಿಭಾಗದ ನ್ಯಾಯಾಧೀಶ ಡಿ.ಎನ್. ಶುಕ್ಲಾ ನಟಿಗೆ ಜಾಮೀನು ಮಂಜೂರು ಮಾಡಿದ್ದು, ಜೂನ್ 21ರಂದು ಮತ್ತೆ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ.
2018ರಲ್ಲಿ ಜಾರ್ಖಂಡ್ ಮೂಲದ ಚಲನಚಿತ್ರ ನಿರ್ಮಾಪಕ ಅಜಯ್ ಕುಮಾರ್ ಸಿಂಗ್ ಅವರು ನಟಿ ಅಮೀಶಾ ಪಟೇಲ್ ವಿರುದ್ಧ ವಂಚನೆ ಮತ್ತು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ನ್ಯಾಯಾಲಯ ಹಲವು ಬಾರಿ ಸಮನ್ಸ್ ಜಾರಿ ಮಾಡಿದ್ದರೂ ಕೂಡ ನಟಿ ಕೋರ್ಟ್ಗೆ ಹಾಜರಾಗಿರಲಿಲ್ಲ. ಆ ಬಳಿಕ, ನ್ಯಾಯಾಲಯ ಅಮೀಶಾ ವಿರುದ್ಧ ವಾರೆಂಟ್ ಜಾರಿ ಮಾಡಿತ್ತು ಎಂದು ದೂರುದಾರರ ಪರ ವಕೀಲ ವಿಜಯ ಲಕ್ಷ್ಮಿ ಶ್ರೀವಾಸ್ತವ ತಿಳಿಸಿದ್ದಾರೆ.
ಕೇಸ್ ಹಿನ್ನೆಲೆ ಹೀಗಿದೆ..: ಸಿನಿಮಾ ನಿರ್ಮಾಪಕ ಅಜಯ್ ಕುಮಾರ್ ಸಿಂಗ್ ಅವರು 'ದೇಸಿ ಮ್ಯಾಜಿಕ್' ಎಂಬ ಶೀರ್ಷಿಕೆಯ ಚಲನಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು, ಈ ಸಿನಿಮಾದಲ್ಲಿ ಅಭಿನಯಿಸುವ ಸಲುವಾಗಿ ನಟಿ ಅಮೀಶಾ ಪಟೇಲ್ ಅವರಿಗೆ 2.5 ಕೋಟಿ ರೂಪಾಯಿ ಹಣ ನೀಡಿದ್ದರು. ಅಮೀಶಾ ಪಟೇಲ್ ಅವರು ಚಿತ್ರದಲ್ಲಿ ನಟಿಸದ ಕಾರಣ ಹಣ ವಾಪಸ್ ಕೊಡುವಂತೆ ತಿಳಿಸಿದ್ದರು. ಅಮೀಶಾ ಅವರು 2.5 ಕೋಟಿ ಚೆಕ್ ಕಳುಹಿಸಿದ್ದರೂ ಅದು ಬೌನ್ಸ್ ಆಗಿತ್ತು. ಈ ಕುರಿತು ಇಬ್ಬರ ನಡುವೆ ಜಗಳ ನಡೆದು ಕೊನೆಗೆ ಅಜಯ್ ಕುಮಾರ್ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ನ್ಯಾಯಾಲಯ ಅಮೀಶಾ ಪಟೇಲ್‌ಗೆ ಜಾಮೀನು ನೀಡಿದ್ದು, ಪ್ರಕರಣದ ಮುಂದಿನ ವಿಚಾರಣೆ ಜೂನ್ 21 ರಂದು ನಡೆಯಲಿದೆ.
ಇದನ್ನೂ ಓದಿ : ನಿರ್ಮಾಪಕನಿಗೆ 2.5 ಕೋಟಿ ರೂ. ಪಂಗನಾಮ...ಸಂಕಷ್ಟದಲ್ಲಿ ನಟಿ ಅಮಿಷಾ ಪಟೇಲ್
ಮತ್ತೊಂದು ಆರೋಪ : ಈ ಹಿಂದೆ ಅಂದರೆ ನವೆಂಬರ್ 16, 2017ರಂದು ಮೊರಾದಾಬಾದ್‌ನ ಹಾಲಿಡೇ ರೀಜೆನ್ಸಿ ಹೋಟೆಲ್‌ನಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಆಗಮಿಸಿ ನಟಿ ಅಮೀಶಾ ಪಟೇಲ್ ನೃತ್ಯ ಕಾರ್ಯಕ್ರಮವನ್ನು ಮಾಡಬೇಕಿತ್ತು. ಆದ್ರೆ, ಅವರು ಮಾಡಿಲ್ಲ ಎಂದು ಈವೆಂಟ್ ಕಂಪೆನಿ ಡ್ರೀಮ್ ವಿಷನ್ ಮಾಲೀಕ ಪವನ್ ಕುಮಾರ್ ಆರೋಪಿಸಿದ್ದರು. ಜೊತೆಗೆ, ಈವೆಂಟ್ ಕಂಪೆನಿಯಿಂದ ಡ್ಯಾನ್ಸ್ ಮಾಡಲು 11 ಲಕ್ಷ ರೂಪಾಯಿ ಮುಂಗಡವಾಗಿ ತೆಗೆದುಕೊಂಡರು ಎಂದು ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಮೊರಾದಾಬಾದ್‌ನ ಎಸಿಜೆಎಂ 5ನೇ ನ್ಯಾಯಾಲಯವು ನಟಿ ಅಮೀಶಾ ಪಟೇಲ್, ಅಹ್ಮದ್ ಷರೀಫ್, ಸುರೇಶ್ ಪರ್ಮಾರ್ ಮತ್ತು ರಾಜ್‌ಕುಮಾರ್ ಗೋಸ್ವಾಮಿ ವಿರುದ್ಧ ಜುಲೈ 20, 2022 ರಂದು ಬಂಧನ ವಾರಂಟ್ ಜಾರಿ ಮಾಡಿತ್ತು.
ಇದನ್ನೂ ಓದಿ : ನಟಿ ಅಮೀಷಾ ಪಟೇಲ್ ವಿರುದ್ಧ ಬಂಧನ ವಾರಂಟ್ ಜಾರಿ
ಅಮೀಶಾ ಪಟೇಲ್ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಫಾಲೋವರ್ಸ್ ಹೊಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಇವರು, ಚೊಚ್ಚಲ ಚಿತ್ರ 'ಕಹೋನಾ ಪ್ಯಾರ್ ಹೈ 'ನಲ್ಲಿ ನಟ ಹೃತಿಕ್ ರೋಷನ್ ಜೊತೆ ಸಹನಟಿನಾಗಿ ಅಭಿನಯಿಸಿದ್ದರು.