ಗ್ಲ್ಯಾಮರ್ ಜೊತೆಗೆ ಮನೋಜ್ಞ ಅಭಿನಯದಿಂದ ಕನ್ನಡ ಚಿತ್ರರಂಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟಿ ಅದಿತಿ ಪ್ರಭುದೇವ, ಹೊಸ ವರ್ಷಕ್ಕೆ ಸಿಹಿ ಸುದ್ದಿ ನೀಡಿದ್ದಾರೆ. ತಾನು ತಾಯಿ ಆಗುತ್ತಿರುವುದನ್ನು ಕಲರ್‌ಫುಲ್ ಫೋಟೋಶೂಟ್ ಮಾಡಿಸಿ ತನ್ನ ಅಭಿಮಾನಿಗಳಿಗೆ ತಿಳಿಸಿದ್ದಾರೆ. "ನಾನು ಐದು ತಿಂಗಳ ಗರ್ಭಿಣಿ. ಈ ವರ್ಷ ಅಮ್ಮ ಆಗುತ್ತೀನಿ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಕಿರುತೆರೆಯಿಂದ ನಟನಾ ವೃತ್ತಿ ಶುರು ಮಾಡಿದ ದಾವಣಗೆರೆ ಸುಂದರಿ ಧೈರ್ಯಂ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ವಿಭಿನ್ನ ಚಿತ್ರಗಳ ಮೂಲಕ ಕನ್ನಡ ಸಿನಿಮಾಪ್ರೇಮಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದರು. ಚಿತ್ರರಂಗದಲ್ಲಿ ಬೇಡಿಕೆ ಇರುವಾಗಲೇ ಅದಿತಿ ಪ್ರಭುದೇವ 2022ರ ನವೆಂಬರ್‌ನಲ್ಲಿ ಉದ್ಯಮಿ ಯಶಸ್ ಎಂಬವರನ್ನು ವರಿಸಿದ್ದರು.
ಸಂಬಂಧಗಳಲ್ಲಿ ಶ್ರೇಷ್ಠವಾದದ್ದು, ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ನೋವು ನಲಿವಿನಲ್ಲೂ ನಮ್ಮ ಬಾಯಿಂದ ಬರುವ ಏಕೈಕ ಪದವೇ ಅಮ್ಮ. ಜೀವನದಲ್ಲಿ ಪ್ರತಿಯೊಬ್ಬರೂ ಪ್ರೀತಿಯಿಂದ ಗೌರವದಿಂದ ಕಾಣುವ ಸಂಬಂಧವದು. ಪ್ರತಿಕ್ಷಣ ನಮಗಾಗಿ ಮಿಡಿಯುವ ಜೀವ ಅಮ್ಮ. ಈಗ ಅದಿತಿ ಪ್ರಭುದೇವ ತಾಯಿ ಆಗ್ತಿರೋದಿಕ್ಕೆ ತುಂಬಾನೇ ಖುಷಿಯಾಗಿದ್ದಾರೆ.
ಚಿತ್ರರಂಗದಲ್ಲಿ ಒಂದು ಮಾತಿದೆ. ಮದುವೆಯಾದರೆ ಸಿನಿಮಾ ಅವಕಾಶಗಳು ಕಡಿಮೆ ಆಗುತ್ವೆ ಅನ್ನೋದು. ಆದರೆ ಈ ಮಾತು ಅದಿತಿ ಜೀವನದಲ್ಲಿ ಸುಳ್ಳಾಗಿದೆ. ಅದೊಂದಿತ್ತು ಕಾಲ, ಮ್ಯಾಟ್ನಿ, ಛೂ ಮಂತರ್ ಅಂತಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡ್ತಿದ್ದಾರೆ. ಸಿನಿಮಾವಷ್ಟೇ ಅಲ್ಲದೆ ವೆಬ್ ಸೀರಿಸ್ಗಳಲ್ಲಿ ಅದಿತಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: ರೆಡ್ ಮಾರ್ಕೆಟ್ 'ಮಾಫಿಯಾ' ಟೀಸರ್ ಬಿಡುಗಡೆ
ಡೈನಾಮಿಕ್ ಪ್ರಿನ್ಸ್ ಜನಪ್ರಿಯತೆಯ ನಟ ಪ್ರಜ್ವಲ್ ದೇವರಾಜ್ ಹಾಗೂ ನಿರ್ದೇಶಕ ಎಚ್.ಲೋಹಿತ್ ಅವರು ಜೊತೆಯಾಗಿ 'ಮಾಫಿಯಾ' ಸಿನಿಮಾ ಮಾಡುತ್ತಿರುವುದು ಗೊತ್ತಿರುವ ಸಂಗತಿ. ಬಹುತೇಕ ಚಿತ್ರೀಕರಣ ಮುಗಿಸಿ ರಿಲೀಸ್ಗೆ ಸಜ್ಜಾಗಿರುವ ತಂಡ ಡಿಸೆಂಬರ್ ಮೊದಲ ವಾರದಲ್ಲಿ ಚಿತ್ರದ ಟೀಸರ್ ರಿಲೀಸ್ ಮಾಡಿತ್ತು. ಬಿಗ್ಬಾಸ್ ಖ್ಯಾತಿಯ ಪ್ರಶಾಂತ್ ಸಂಬರಗಿ ಟೀಸರ್ ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದರು. ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಜೋಡಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ನಟ ಶೈನ್ ಶೆಟ್ಟಿ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ಪಾಂಡಿಕುಮಾರ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ, ಜಾಲಿ ಬಾಸ್ಟಿನ್ ಸಾಹಸ ನಿರ್ದೇಶನ ಮಾಡಿದ್ದಾರೆ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ಬಂಡವಾಳ ಹೂಡಿದ್ದಾರೆ.