ಇತ್ತೀಚಿನ ಕೆಲವು ವರ್ಷಗಳಲ್ಲಿ ಕನ್ನಡ ಚಿತ್ರರಂಗವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ನಟ ಯಶ್ ಅವರಿಗೂ ಸಲ್ಲುತ್ತದೆ. ಬೆಂಗಳೂರಿನ ಗಾಂಧಿನಗರದಿಂದ ಹಿಡಿದು ಮುಂಬೈನ ಬಾಲಿವುಡ್ ಅಂಗಳದವರೆಗೂ ಇವರ ಮುಂದಿನ ಸಿನಿಮಾದ ಬಗ್ಗೆ ಈಗ ಚರ್ಚೆಯಾಗುತ್ತಿದೆ. ಇದಕ್ಕೆ ಜನವರಿ 8ರಂದು ಉತ್ತರ ಸಿಗುವ ನಿರೀಕ್ಷೆ ಇದೆ. ಏಕೆಂದರೆ ಅಂದು ಯಶ್ ಅವರ ಹುಟ್ಟುಹಬ್ಬ.
ಆ ದಿನ ರಾಕಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ಕೊಡಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ನೆಚ್ಚಿನ ನಟನ ಬರ್ತ್ಡೇಯನ್ನು ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಆದರೆ ಯಶ್, ತಮ್ಮ ಹುಟ್ಟುಹಬ್ಬದ ವಿಚಾರವಾಗಿ ಅಭಿಮಾನಿಗಳಿಗೆ ಕಹಿಸುದ್ದಿ ನೀಡಿದ್ದಾರೆ ಎನ್ನಬಹುದು. ಇದರ ಜೊತೆಗೆ, ಒಂದು ಸರ್ಪ್ರೈಸ್ ಕಾಯ್ದಿರಿಸಿದ್ದಾರೆ.
ಇನ್ನೆರಡು ದಿನಗಳಲ್ಲಿ ಯಶ್ 37ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. 2020-21ರಲ್ಲಿ ಕೊರೊನಾ ಇದ್ದ ಕಾರಣ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಕಳೆದ ವರ್ಷವೂ ಅಷ್ಟೇ. ಪತ್ನಿ ರಾಧಿಕಾ ಪಂಡಿತ್ ಮತ್ತು ಮಕ್ಕಳಾದ ಐರಾ, ಯಥರ್ವ್ ಜೊತೆ ಸರಳವಾಗಿ ಕೇಕ್ ಕಟ್ ಮಾಡಿ ಬರ್ತ್ಡೇ ಆಚರಿಸಿದ್ದರು. ಈ ವರ್ಷವಾದರೂ ಅವರ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ನಟ ವ್ಯೆಯಕ್ತಿಕ ವಿಚಾರವಾಗಿ ಈ ವರ್ಷ ಬರ್ತ್ಡೇ ಆಚರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ತಮ್ಮ ಫ್ಯಾನ್ಸ್‌ಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಇದನ್ನೂ ಓದಿ: 'ಕೆಜಿಎಫ್ ಯಶಸ್ಸೇ ಅಂತಿಮವೇ? ನನಗೆ ಮತ್ತಷ್ಟು ಸಾಧಿಸುವ ಹಸಿವಿದೆ': ಯಶ್
ರಾಕಿಂಗ್ ಸ್ಟಾರ್ ಮನವಿ ಪತ್ರ ಹೀಗಿದೆ...
ನಿಮಗಾಗಿ ವಿಭಿನ್ನ ಪ್ರಯತ್ನದಲ್ಲಿದ್ದೇನೆ..: 'ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ನಿಮ್ಮ ಕಲ್ಮಶವಿಲ್ಲದ ಪ್ರೀತಿ, ಸಾಟಿಯಿಲ್ಲದ ಅಭಿಮಾನ, ನನ್ನ ಹೃದಯ ತುಂಬುವಂತೆ ಮಾಡಿದೆ. ನನಗೆ ಗೊತ್ತು ನೀವೆಲ್ಲಾ ಕಾಯುತ್ತಿದ್ದೀರಿ. ಹುಟ್ಟಿದ ದಿನ ತುಂಬಾ ವಿಶೇಷ ಅಂತ ನನಗೆ ಅನ್ನಿಸೋಕೆ ಶುರುವಾಗಿದ್ದೇ ಇತ್ತೀಚಿನ ವರ್ಷಗಳಲ್ಲಿ. ನೀವು ನನ್ನ ದಿನವನ್ನು ನಿಮ್ಮ ದಿನವನ್ನಾಗಿಸಿಕೊಂಡು ಆಚರಿಸಿ ವಿಜೃಂಭಿಸೋಕೆ ಶುರು ಮಾಡಿದ್ದರಿಂದ. ಹಾಗಾಗಿ ನಾನು ಕೂಡ ಈ ವರ್ಷದ ಹುಟ್ಟುಹಬ್ಬದಂದು ನಿಮ್ಮನ್ನು ನೋಡಬೇಕು, ನಿಮ್ಮೊಂದಿಗೆ ಸಮಯ ಕಳೆಯಬೇಕು ಎಂದುಕೊಂಡಿದ್ದೆ. ಆದರೆ ಜಗದಗಲದ ನಿರೀಕ್ಷೆಯಲ್ಲಿರುವ ನಿಮ್ಮ ಮುಂದೆ ನಿಲ್ಲಲು ಇನ್ನೂ ಸ್ವಲ್ಪವೇ ಸ್ವಲ್ಪ ಸಮಯ ಕೊಡಿ. ನಿಮಗಾಗಿ ವಿಭಿನ್ನವಾಗಿರುವುದನ್ನೇನೋ ನಿಮ್ಮ ಮುಂದೆ ತರಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ. ಅಲ್ಲಿಯವರೆಗೂ ನಿಮ್ಮ ತಾಳ್ಮೆ ಮತ್ತು ಪ್ರೀತಿಯೇ ನನಗೆ ಈ ವರ್ಷದ ಹುಟ್ಟುಹಬ್ಬದ ನಿಮ್ಮ ಉಡುಗೊರೆ. ಕ್ಷಮಿಸಿ, ಈ ವರ್ಷದ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರಲು ಸಾಧ್ಯವಾಗುತ್ತಿಲ್ಲ. ಆದರೆ ಆದಷ್ಟು ಬೇಗ ನಿಮಗೆ ಸಿಗುತ್ತೇನೆ. ನಿಮ್ಮ ಕಾಯುವಿಕೆಯನ್ನು ಅರ್ಥಪೂರ್ಣವಾಗಿಸುತ್ತೇನೆ." ಎಂದು ಪತ್ರದಲ್ಲಿ ಬರೆದಿದ್ದಾರೆ.
ಇತ್ತೀಚೆಗೆ ಪಾಂಡ್ಯ ಸಹೋದರರೊಂದಿಗೆ ಯಶ್: ಕೆಲವು ದಿನಗಳ ಹಿಂದೆ ಯಶ್ ಅವರು ಟೀಂ ಇಂಡಿಯಾ ಕ್ರಿಕೆಟಿಗ ಸಹೋದರರಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಜೊತೆ ಕಾಣಿಸಿಕೊಂಡಿದ್ದರು. ಹಾರ್ದಿಕ್ ಪಾಂಡ್ಯ ಈ ಫೋಟೋ ಹಂಚಿಕೊಂಡು, ಕೆಜಿಎಫ್ 3 ಎಂದು ಬರೆದುಕೊಂಡಿದ್ದರು. ಇದನ್ನು ಕಂಡ ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆ ಹರಿಸಿದ್ದರು. ಫೋಟೋಗಳಿಗೆ ಸಾಕಷ್ಟು ಲೈಕ್ಸ್ ಕೂಡ ಬಂದಿತ್ತು.
ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು, ಯಾರ ಜೊತೆ?