ಟ್ರೈಲರ್ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಸಿನಿಮಾ ಲಾಠಿ. ಆ್ಯಕ್ಷನ್ ಸ್ಟಾರ್ ಆಗಿ ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಸ್ಟಾರ್ ಡಮ್ ಹೊಂದಿರುವ ನಟ ವಿಶಾಲ್ ಲಾಠಿ ಸಿನಿಮಾದಲ್ಲಿ ಹೆಡ್ ಕಾನ್ಸ್ಟೇಬಲ್ ಪಾತ್ರ ಮಾಡಿದ್ದಾರೆ. ಈ ಪಾತ್ರ ವಿಶಾಲ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದ್ದು, ಇದೇ ಡಿಸೆಂಬರ್ 22ಕ್ಕೆ ವಿಶ್ವದಾದ್ಯಂತ ಲಾಠಿ ಸಿನಿಮಾ ತೆರೆ ಕಾಣಲಿದೆ. ಲಾಠಿ ಸಿನಿಮಾ ಪ್ರಚಾರ ಹಿನ್ನೆಲೆ ನಟ ವಿಶಾಲ್ ಬೆಂಗಳೂರಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಚಿತ್ರದ ಬಗ್ಗೆ ಸಾಕಷ್ಟು ವಿಚಾರಗಳನ್ನು ಈಟಿವಿ ಭಾರತದ ಜೊತೆ ಹಂಚಿಕೊಂಡಿದ್ದಾರೆ.
ಈಗಾಗಲೇ ಸಿನಿಮಾಗಳಲ್ಲಿ ಐಪಿಎಸ್ ಪೊಲೀಸ್ ಆಫೀಸರ್ ಪಾತ್ರ ಮಾಡಿರೋ ನಟ ವಿಶಾಲ್ ಮೊದಲ ಬಾರಿಗೆ ಹೆಡ್ ಕಾನ್ಸ್ಟೇಬಲ್ ಪಾತ್ರ ಮಾಡಿದ್ದಾರೆ. ಲಾಠಿ ಸಿನಿಮಾ ಯೂನಿವರ್ಸಲ್ ಕಥೆ. ಈ ಸಿನಿಮಾ ದೇಶದ ಎಲ್ಲಾ ಹೆಡ್ ಕನ್ಸ್ಟೇಬಲ್ ಅವರಿಗೆ ಅರ್ಪಿಸುತ್ತೇವೆ. ಈ ಸಿನಿಮಾ ನಿಜಕ್ಕೂ ಎಲ್ಲಾ ವರ್ಗದ ಅಭಿಮಾನಿಗಳಿಗೆ ಇಷ್ಟ ಆಗಲಿದೆ. ಕ್ಲೈಮಾಕ್ಸ್ನಲ್ಲಿ ಒಂದು ಸಂದೇಶ ಇದೆ ಎಂದು ವಿಶಾಲ್ ತಿಳಿಸಿದರು.
ಇನ್ನು ದಿ. ಪುನೀತ್ ರಾಜ್ಕುಮಾರ್ ಇಷ್ಟ ಆಗಿದ್ದು, ಅವರ ಸರಳತೆ ಗುಣದಿಂದ. ಅವರೋರ್ವ ಸೂಪರ್ ಸ್ಟಾರ್ ಆಗಿದ್ದರೂ ಕೂಡ ಸರಳವಾಗಿ ಜೀವನ ನಡೆಸಿದರು. ಯಾರಿಗೂ ಗೊತ್ತಿಲ್ಲದೇ ಮಾಡಿರೋ ಸಾಮಾಜಿಕ ಕೆಲಸಗಳು ಎಲ್ಲರಿಗೂ ಮಾದರಿ. ಹೀಗಾಗಿ ಪುನೀತ್ ಅವರ ಮೇಲೆ ನನಗೆ ಗೌರವ ಇದೆ ಅಂತಾ ವಿಶಾಲ್ ತಿಳಿಸಿದರು.
ಸದ್ಯ ಶಿವ ರಾಜ್ಕುಮಾರ್ ಹಾಗು ಗೀತಾ ಶಿವ ರಾಜ್ಕುಮಾರ್ ನೋಡಿಕೊಳ್ಳುತ್ತಿರುವ ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಿ, ಅಲ್ಲಿನ ಮಕ್ಕಳ ಜೊತೆ ಕಾಲ ಕಳೆದೆ. ಮನಸ್ಸಿಗೆ ತುಂಬಾ ಖುಷಿಯಾಯಿತು. ಇನ್ನು ಶಿವಣ್ಣ ಯಾವಾಗ ಹೇಳುತ್ತಾರೋ ಆಗ ನಾನು ಶಕ್ತಿಧಾಮದ ಅಭಿವೃದ್ಧಿಗೆ ಕೈ ಜೋಡಿಸುತ್ತೇನೆಂದು ವಿಶಾಲ್ ಹೇಳಿದರು.
ಇದನ್ನೂ ಓದಿ: ಮುಂದೊಂದು ದಿನ ಕನ್ನಡ ಸಿನಿಮಾದಲ್ಲಿ ನಟಿಸುವೆ: ತಮಿಳು ನಟ ವಿಶಾಲ್
ನನ್ನ ತಂದೆಯ ಆಸೆಯಂತೆ ನನಗೆ ಕನ್ನಡದಲ್ಲಿ ಸಿನಿಮಾದಲ್ಲಿ ಅಭಿನಯಿಸುವ ಆಶೆ ಇದೆ. ಮುಂದಿನ ದಿನಗಳಲ್ಲಿ ನಟನೆ ಮಾಡುತ್ತೇನೆ. ಈಗ ನಾನು ನಿರ್ದೇಶನ ಮಾಡಬೇಕಿರೋ ಸಿನಿಮಾ ಬಗ್ಗೆ ಹೆಚ್ಚು ಗಮನ ವಹಿಸುತ್ತಿದ್ದೇನೆ ಎಂದು ತಿಳಿಸಿದರು. ಇನ್ನೂ ಬೆಂಗಳೂರು ನನ್ನ ಎರಡನೇ ಮನೆ ಅಂತಾ ಹೇಳುವ ಮೂಲಕ ವಿಶಾಲ್ ಕನ್ನಡಿಗರ ಮನಸ್ಸಿಗೆ ಹತ್ತಿರವಾದರು.