ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್ 'ಲಿಯೋ' ಸಿನಿಮಾದ ಜೊತೆಗೆ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ತಮಿಳು ರಾಜಕೀಯದ ಅಗ್ರಮಾನ್ಯ ನಾಯಕರ ನಿಧನದಿಂದ ಉಂಟಾದ ನಿರ್ವಾತ ತುಂಬುವ ಗುರಿಯನ್ನು ಅವರು ಹೊಂದಿದ್ದಾರೆ ಎನ್ನಲಾಗಿದೆ.
ಅದಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ನಟ ತಮ್ಮ ಪನೈಯೂರ್ ಫಾರ್ಮ್ನಲ್ಲಿ ಅಭಿಮಾನಿಗಳು ಹಾಗೂ ವಿಜಯ್ ಮಕ್ಕಳ್ ಇಯಕ್ಕಂ ಸದಸ್ಯರೊಂದಿಗೆ ಸಭೆ ನಡೆಸಿದ್ದರು. ಇದರಿಂದ ಅವರು ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ಮಾತು ಎಲ್ಲೆಡೆ ಕೇಳಿ ಬಂದಿತ್ತು. ಇದೀಗ ಮತ್ತೊಂದು ವಿಚಾರವಾಗಿ ನಟ ವಿಜಯ್ ಸುದ್ದಿಯಲ್ಲಿದ್ದಾರೆ.
'ವಿಜಯ್ ಮಕ್ಕಳ್ ಇಯಕ್ಕಂ': ದಳಪತಿ ವಿಜಯ್ ಅವರೇ 'ವಿಜಯ್ ಮಕ್ಕಳ್ ಇಯಕ್ಕಂ' ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಇದರ ಮೂಲಕ ರಕ್ತದಾನ, 'ವಿಝಿಯಾಗಂ' ಎಂಬ ಹೆಸರಿನಲ್ಲಿ ನೇತ್ರದಾನ, ಉಚಿತ ಔಷಧ, ಹಾಲು, ಮೊಟ್ಟೆ, ಶಿಶುಗಳಿಗೆ ಬನ್ ನೀಡುವುದಲ್ಲದೇ, ಇದೇ ರೀತಿಯ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದೀಗ, ವಿಜಯ್ ಮಕ್ಕಳ್ ಇಯಕ್ಕಂ ಅಡಿಯಲ್ಲಿ 'ತಳಪತಿ ವಿಜಯ್ ಪಾಯಿಲಗಂ' ಎಂಬ ಹೆಸರಿನಲ್ಲಿ ಶೈಕ್ಷಣಿಕ ಕೇಂದ್ರವನ್ನು ಪ್ರಾರಂಭಿಸಲು ಮುಂದಾಗಿದ್ದಾರೆ. ಪಾಯಿಲಗಂ ಎಂದರೆ ಶೈಕ್ಷಣಿಕ ಕೇಂದ್ರ ಎಂದರ್ಥ.
ಇದನ್ನೂ ಓದಿ: 'ಕುತಂತ್ರಿ ನರಿಗಳ ಮಾನವ ರೂಪ'.. 'ಕರಟಕ ದಮನಕ' ಮೊದಲ ಝಲಕ್ ನೋಡಿ..
ಈ ವಿಚಾರವನ್ನು ವಿಎಂಐ ಪ್ರಧಾನ ಕಾರ್ಯದರ್ಶಿ ಬುಸ್ಸಿ ಆನಂದ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಅವರ ಹೇಳಿಕೆಯಲ್ಲಿ, "ತಮಿಳುನಾಡು ಮಾಜಿ ಮುಖ್ಯಮಂತ್ರಿ ಕೆ. ಕಾಮರಾಜ್ ಅವರ ಜನ್ಮದಿನದಂದು ಅವರ ಪ್ರತಿಮೆಗೆ ಪುಷ್ಪಗಳನ್ನು ಅರ್ಪಿಸಲು VMI (ವಿಜಯ್ ಮಕ್ಕಳ್ ಇಯಕ್ಕಂ) ಕಾರ್ಯಕರ್ತರನ್ನು ವಿನಂತಿಸಲಾಗಿದೆ. ಇದನ್ನು ನಮ್ಮ ದಳಪತಿ ವಿಜಯ್ ಅವರು ಕೋರಿದ್ದಾರೆ. ಅಲ್ಲದೇ, ವಿಎಂಐ ಸದಸ್ಯರು ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ಗಳು, ಪೆನ್ನುಗಳು, ಪೆನ್ಸಿಲ್‌ಗಳು ಮತ್ತು ಶೈಕ್ಷಣಿಕ ರೀತಿಯ ಸಲಕರಣೆಗಳನ್ನು ನೀಡುವಂತೆ ವಿನಂತಿಸಲಾಗಿದೆ." ಎಂದು ಬರೆದಿದ್ದಾರೆ.
ಮುಂದುವರೆದು, "ತಮಿಳುನಾಡಿನ ಮಾಜಿ ಸಿಎಂ ಕೆ. ಕಾಮರಾಜ್ ಅವರ ಜನ್ಮದಿನದಂದು ತಮಿಳುನಾಡಿನಾದ್ಯಂತ 'ತಳಪತಿ ವಿಜಯ್ ಪಾಯಿಲಗಂ' ಶಿಕ್ಷಣ ಸಂಸ್ಥೆ ಪ್ರಾರಂಭವಾಗಲಿದೆ ಎಂದು ನಾವು ಹೆಮ್ಮೆಯಿಂದ ಹೇಳುತ್ತೇವೆ. ಸಮಿತಿ ಕೆ.ಕಾಮರಾಜ್ ಅವರ ಜನ್ಮದಿನವನ್ನು ತಮಿಳುನಾಡು ಸರ್ಕಾರವು 'ಶಿಕ್ಷಣ ಅಭಿವೃದ್ಧಿ ದಿನ' ಎಂದು ಆಚರಿಸುತ್ತಿದೆ" ಎಂದು ತಿಳಿಸಿದ್ದಾರೆ. ಮತ್ತೊಂದು ಸಮಾಜಮುಖಿ ಕಾರ್ಯದ ಮೂಲಕ ನಟ ವಿಜಯ್ ರಾಜಕೀಯ ಪ್ರವೇಶಿಸಲಿದ್ದಾರೆ ಎನ್ನಲಾಗಿದೆ.
ರಾಜಕೀಯ ವದಂತಿ ಹುಟ್ಟಿಕೊಂಡಿದ್ದು ಹೀಗೆ.. ಕೆಲವು ದಿನಗಳ ಹಿಂದೆ ತಮಿಳುನಾಡಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ 10ನೇ ತರಗತಿ ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ಮೊದಲ ಮೂರು ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ದಳಪತಿ ವಿಜಯ್ ಶಿಕ್ಷಣ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಸಮಾರಂಭದಲ್ಲಿ ವಿಜಯ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು. ಬಿ.ಆರ್. ಅಂಬೇಡ್ಕರ್, ತಿರುವಳ್ಳೂರ್ ಹಾಗೂ ಕಾಮರಾಜ್ ಅತ್ಯಂತ ಗೌರವಾನ್ವಿತ ವ್ಯಕ್ತಿಗಳು. ವಿವಿಧ ರಾಜಕೀಯ ಪಕ್ಷಗಳಿಂದ ಹಣ ಪಡೆದು ತಮ್ಮ ಅಮೂಲ್ಯವಾದ ಮತಗಳನ್ನು ಚಲಾಯಿಸದಂತೆ ತಮ್ಮ ಪೋಷಕರಿಗೆ ಸಲಹೆ ನೀಡುವಂತೆ ಅವರು ಮಕ್ಕಳಿಗೆ ಕರೆ ನೀಡಿದ್ದರು. ಈ ರೀತಿಯಾಗಿ ದಳಪತಿ ವಿಜಯ್ ಮಾತನಾಡಿದ್ದರಿಂದ ವದಂತಿಗಳು ಹುಟ್ಟಿಕೊಂಡವು.
ಇದನ್ನೂ ಓದಿ: 'Baby'ಯಾಗಿ ಬಂದ ವಿಜಯ್ ದೇವರಕೊಂಡ ಸಹೋದರ: ಆನಂದ್ ಸಿನಿಮಾಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೀಗಿತ್ತು..