ಬ್ಯಾಂಕ್ ಆಫ್ ಬರೋಡಾದ ಆಸ್ತಿ ಹರಾಜು ನೋಟಿಸ್ ಕುರಿತು ಪ್ರತಿಕ್ರಿಯಿಸಲು ಬಾಲಿವುಡ್ ನಟ ಸನ್ನಿ ಡಿಯೋಲ್ ನಿರಾಕರಿಸಿದ್ದಾರೆ. ಇದು ವೈಯಕ್ತಿಕ ವಿಚಾರವಾಗಿರುವುದರಿಂದ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಇ - ಹರಾಜು ಮೂಲಕ ಮುಂಬೈನ ಜುಹು ಪ್ರದೇಶದಲ್ಲಿರುವ ಗದರ್ 2 ನಟನ ಆಸ್ತಿಯನ್ನು ಮಾರಾಟ ಮಾಡಿ ಬಾಕಿ ಇರುವ 56 ಕೋಟಿ ರೂಪಾಯಿಗಳನ್ನು ಪಡೆದುಕೊಳ್ಳಲಾಗುವುದು ಎಂದು ಭಾನುವಾರ ಬ್ಯಾಂಕ್ ಆಫ್ ಬರೋಡಾ ತಿಳಿಸಿತ್ತು.
ಸನ್ನಿ ಡಿಯೋಲ್ ಪ್ರತಿಕ್ರಿಯೆ: ಆಸ್ತಿ ಹರಾಜು ವಿಚಾರವಾಗಿ ಪ್ರತಿಕ್ರಿಯಿಸಿದ ಸನ್ನಿ ಡಿಯೋಲ್ "ನಾನು ಈ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಇದು ವೈಯಕ್ತಿಕ ವಿಚಾರ. ನಾನು ಏನಾದರೂ ಹೇಳುತ್ತೇನೆ. ಅದನ್ನು ಜನರು ತಪ್ಪಾಗಿ ಅರ್ಥೈಸಲಾಗುತ್ತದೆ" ಎಂದು ಮಂಗಳವಾರ ಹೇಳಿದ್ದಾರೆ. ಈ ಮೂಲಕ ಬ್ಯಾಂಕ್ ಆಫ್ ಬರೋಡಾದಿಂದ ಬಂದಿದ್ದ ನೋಟಿಸ್ ಕುರಿತು ಅವರು ಯಾವುದೇ ಮಾಹಿತಿಯನ್ನು ನೀಡಿಲ್ಲ. ಇನ್ನು ನಿನ್ನೆಯಷ್ಟೇ ಮುಂಬೈನ ಜುಹು ಪ್ರದೇಶದಲ್ಲಿರುವ ನಟ ಮತ್ತು ಬಿಜೆಪಿ ಸಂಸದ ಸನ್ನಿ ಡಿಯೋಲ್ ಒಡೆತನದ ಬಂಗಲೆಗೆ ಸಂಬಂಧಿಸಿದ ಹರಾಜು ನೋಟಿಸ್ ಅನ್ನು ಹಿಂಪಡೆಯಲಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾ ಪ್ರಕಟಣೆ ಹೊರಡಿಸಿತ್ತು.
ಸಂಪೂರ್ಣ ವಿವರ: ಸನ್ನಿ ಡಿಯೋಲ್ ಅವರ ಮುಂಬೈ ವಿಲ್ಲಾವನ್ನು ಬ್ಯಾಂಕ್ ಆಫ್ ಬರೋಡಾ ಹರಾಜಿಗೆ ಹಾಕಿತ್ತು. 55 ಕೋಟಿ ಲೋನ್ ಹಾಗೂ ಅದರ ಬಡ್ಡಿಯನ್ನು ಪಾವತಿಸದ ಹಿನ್ನೆಲೆಯಲ್ಲಿ ಮುಂಬೈನ ಜುಹುವಿನಲ್ಲಿರುವ 'ಸನ್ನಿ ವಿಲ್ಲಾ'ವನ್ನು ಹರಾಜು ಹಾಕಲಾಗಿದೆ ಎಂದು ಹರಾಜು ನೊಟೀಸ್ ಅನ್ನು ಬ್ಯಾಂಕ್ ಆಫ್ ಬರೋಡಾ ಭಾನುವಾರ ರಾಷ್ಟ್ರೀಯ ಸುದ್ದಿ ಪತ್ರಿಕೆಯಲ್ಲಿ ಪ್ರಕಟಿಸಿತ್ತು.
ಇದನ್ನೂ ಓದಿ: 'ಗದರ್ 2' ಸಕ್ಸಸ್ ಮೂಡ್ನಲ್ಲಿದ್ದ ಸನ್ನಿ ಡಿಯೋಲ್ಗೆ ಶಾಕ್... ಮುಂಬೈನಲ್ಲಿರುನ ನಟನ ವಿಲ್ಲಾ ಹರಾಜಿಗಿಟ್ಟ ಬ್ಯಾಂಕ್!
ಸನ್ನಿಯ ಬಂಗಲೆ, ಅದರ ಸುತ್ತ ಇರುವ 599.44 ಚದರ ಮೀಟರ್ ಪ್ರದೇಶ ಮತ್ತು ನಟನ ಕುಟುಂಬದ ಒಡೆತನದಲ್ಲಿರುವ ಸನ್ನಿ ಸೌಂಡ್ಸ್ ಕಂಪನಿಯನ್ನು ಹರಾಜು ಹಾಕಲಾಗುವುದು. ಜುಹು ಆಸ್ತಿಯ ಹರಾಜು 51.43 ಕೋಟಿ ರೂಪಾಯಿಗಳಿಗೆ ಪ್ರಾರಂಭವಾಗುವ ನಿರೀಕ್ಷೆಯಿದೆ, ಕನಿಷ್ಠ ಬಿಡ್ಡಿಂಗ್ ಮೊತ್ತವನ್ನು 5.14 ಕೋಟಿ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಜೊತೆಗೆ ಸೆಪ್ಟಂಬರ್ 25 ರಂದು ಜುಹು ಆಸ್ತಿಯ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು.
ಆದರೆ, ಹರಾಜಿಗೂ ಮುನ್ನವೇ ಸೋಮವಾರ, ಬ್ಯಾಂಕ್ ನೋಟಿಸ್ ಹಿಂಪಡೆದಿದೆ. ಸನ್ನಿ ಡಿಯೋಲ್ ಎಂಬ ಹೆಸರಿನಿಂದ ಕರೆಯಲ್ಪಡುವ ಶ್ರೀ ಅಜಯ್ ಸಿಂಗ್ ಡಿಯೋಲ್ ಅವರಿಗೆ ಸಂಬಂಧಿಸಿದ ಹರಾಜು ನೋಟಿಸ್ ಅನ್ನು ತಾಂತ್ರಿಕ ಕಾರಣಗಳಿಂದಾಗಿ ಹಿಂತೆಗೆದುಕೊಳ್ಳಲಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾ ಹೇಳಿಕೆಯಲ್ಲಿ ವಿವರಿಸಿತ್ತು. ಇದರಿಂದ ನಟನಿಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ಸಾಲಕ್ಕೆ ಸನ್ನಿ ಡಿಯೋಲ್ ತಂದೆ ಧರ್ಮೇಂದ್ರ ವೈಯಕ್ತಿಕ ಗ್ಯಾರಂಟಿ ನೀಡಿದ್ದರು.
ಇದನ್ನೂ ಓದಿ: ಸನ್ನಿ ಡಿಯೋಲ್ ಬಂಗಲೆ ಹರಾಜು ನೋಟಿಸ್ ಹಿಂಪಡೆದ ಬ್ಯಾಂಕ್ ಆಫ್ ಬರೋಡಾ