ರೈತ ದೇಶದ ಬೆನ್ನೆಲುಬು. ನಾವು ಎಷ್ಟೇ ಆಧುನಿಕವಾಗಿ ಮುಂದುವರಿದರೂ ರೈತನ ಕೊಡುಗೆ ನಮ್ಮೆಲ್ಲರಿಗೂ ಬಹಳ ಮುಖ್ಯ. ರೈತ ಜೀವನದ ಕಥಾಹಂದರ ಒಳಗೊಂಡಿರುವ, ರೈತನ ಬದುಕು, ಬವಣೆಗಳೊಂದಿಗೆ ಹಳ್ಳಿಯ ಸೊಗಡು, ಗ್ರಾಮೀಣ ಕಲೆಗಳು ಜೊತೆಗೆ ಸ್ನೇಹ, ಪ್ರೀತಿ, ಬಾಂಧವ್ಯ ಹೀಗೆ ಎಲ್ಲ ಅಂಶಗಳನ್ನು ಬೆಸೆದುಕೊಂಡು ತೆರೆ ಮೇಲೆ ಬರಲು ಸಿದ್ಧವಾಗುತ್ತಿರುವ ಚಿತ್ರವೇ ಶ್ರೀಮಂತ.
ರೈತ ಗೀತೆ ಬಿಡುಗಡೆ: ಬಾಲಿವುಡ್ ನಟ ಸೋನು ಸೂದ್ ನಾಯಕನಾಗಿ ಅಭಿನಯಿಸಿರುವ ಶ್ರೀಮಂತ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಪೋಸ್ಟರ್ ಹಾಗೂ ರೈತ ಗೀತೆಯ ಲಿರಿಕಲ್ ವಿಡಿಯೋ ಹಾಡೊಂದನ್ನು ಬೆಂಗಳೂರಿನ ಕಲಾವಿದರ ಭವನದಲ್ಲಿ ಬಿಡುಗಡೆ ಮಾಡಲಾಗಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಾದಬ್ರಹ್ಮ ಡಾ. ಹಂಸಲೇಖ ಹಾಗೂ ಯುವ ರೈತ ಮುಖಂಡರಾದ ಸಂತೋಷ್ ಹಾಗೂ ಚಿರಂತ್ ಆಗಮಿಸಿ ಪೋಸ್ಟರ್ ಲಾಂಚ್ ಮಾಡಿದರು. ಹಾಗೆಯೇ ರೈತನ ಕುರಿತಾದ 'ಮಳೆ ಮುನಿದರೆ ಸಂತ.. ಜನಪದ ಸಂತ.. ಜನಪದ ಸಂತ...' ಎಂಬ ಹಾಡನ್ನು ಹಂಸಲೇಖ ಹಾಗೂ ನಿರ್ಮಾಪಕ ಜಿ. ನಾರಾಣಪ್ಪ ಅವರು ಬಿಡುಗಡೆ ಮಾಡಿದರು. ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಕಂಠಸಿರಿಯಲ್ಲಿ ಹೊರ ಬಂದಿದ್ದು, ಇದು ಅವರ ಕೊನೆ ಹಾಡಾಗಿದೆ.
ಅಪ್ಪು ಇಲ್ಲದ ಜಾಗ ಇಲ್ಲ: ಬಳಿಕ ಮಾತನಾಡಿದ ಹಂಸಲೇಖ ಅವರು, ರೈತ ಗೀತೆ ಬಿಡುಗಡೆ ಮಾಡಿದ ಕ್ಷಣ ಎಂದಿಗೂ ಮರೆಯಲಾಗದ ಕ್ಷಣ. ಹಾಡು ಬಹಳ ಸೊಗಸಾಗಿ ಬಂದಿದೆ. ಈ ಸಭಾಂಗಣಕ್ಕೆ ಬರುತ್ತಿದ್ದಂತೆ ನಾನು ನನ್ನ ದೇವರು ಎಸ್ಪಿಬಿ ಅವರಿಗೆ ಹಾಗೂ ಅಪ್ಪುಗೆ ಕೈಮುಗಿದೆ. ಅವರು ವಯಸ್ಸಿನಲ್ಲಿ ಚಿಕ್ಕವರಾದರೂ ಅವರ ಸಾಧನೆ ಅಪಾರ. ಅಪ್ಪು ಇಲ್ಲದ ಜಾಗ ಇಲ್ಲವೇ ಇಲ್ಲ. ಅತಿ ಚಿಕ್ಕ ವಯಸ್ಸಿನಲ್ಲೇ ಇಂತಹ ಮಹಾನ್ ಸಾಧನೆ ಮಾಡಿ ಎಲ್ಲರ ಮನಸ್ಸಿನ ಭಗವಂತರಾಗಿದ್ದಾರೆ ಅಪ್ಪು ಎಂದು ದಿ. ಪುನೀತ್ ರಾಜ್ಕುಮಾರ್ ಬಗ್ಗೆ ಗುಣಗಾನ ಮಾಡಿದರು.
ಹಾಗೆಯೇ ಅವರ ದೇವರ ದಿ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಬಗ್ಗೆ ಮಾತನಾಡುತ್ತ, ಬಹುತೇಕ ಎಲ್ಲ ಭಾಷೆಯಲ್ಲೂ ಹಾಡುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗ, ಪ್ರೀತಿ, ವಿಶ್ವಾಸವನ್ನು ಗಳಿಸಿದ ನನ್ನ ದೇವರು ಹಾಡಿದ ಕೊನೆಯ ಹಾಡು ಈ ರೈತ ಗೀತೆ. ನನ್ನ ಜೀವನದಲ್ಲೇ ಮರೆಯಲಾಗದ ಹಾಡು ಇದಾಗಲಿದೆ. ಎಸ್.ಪಿ.ಬಿ 50 ವರ್ಷಗಳಲ್ಲಿ ಎಲ್ಲ ಭಾಷೆಯಲ್ಲಿ ಹಾಡಿದ್ದಾರೆ. ಅಪ್ಪು ಕೂಡ 45 ವರ್ಷದಲ್ಲೇ ಮನೆ ಮನೆಗೆ ತಲುಪಿದ್ದಾರೆ ಎಂದರು.
ಯುವ ಕಲಾವಿದರಿಗೆ ನನ್ನ ಸಾಥ್: ಇನ್ನೂ 80 ವರ್ಷದ ಕನ್ನಡ ಚಿತ್ರರಂಗವನ್ನು ರೈತ ಸಮುದಾಯ ಕಾಯ್ದಿದೆ. ಯುವನಟರೇ ಜನಪದ ಕಥೆ ಇಟ್ಟು ಸಿನಿಮಾ ಮಾಡಿ. ನೀವು ಮುಂದಾದರೆ ನಾನು ಕೂಡ ನಿಮ್ಮ ಜೊತೆ ನಿರ್ಮಾಣದಲ್ಲಿ ಸಾಥ್ ನೀಡುತ್ತೇನೆ ಎಂದರು.
ಈಗ ಎಲ್ಲೆಲ್ಲೂ ಪಾನ್ ಇಂಡಿಯಾ ಆಗಿದೆ. ನಮ್ಮ ಸಂಸ್ಕೃತಿ, ನಮ್ಮ ಭಾಷೆ ಮುಖ್ಯ ಎನ್ನುತ್ತ, ನಿರ್ದೇಶಕ ಹಾಸನ್ ರಮೇಶ್ ಸುಮಾರು 5 ವರ್ಷದ ಹಿಂದೆ ಕಥೆ ಇಟ್ಟುಕೊಂಡು ಬಂದಾಗ ಇವರು ಎಷ್ಟು ಗಟ್ಟಿ ಎಂದು ತಿಳಿಯಿತು. ಹಾಗೆಯೇ ಅದಕ್ಕೆ ಪೂರಕವಾಗಿ ಸಂಗೀತವನ್ನು ನೀಡುವ ಪ್ರಯತ್ನ ಮಾಡಿದ್ದೇನೆ. ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಜಿ. ನಾರಣಪ್ಪ ಅವರು ಎಸ್ಪಿಬಿ ಅವರ ಕೈಯಲ್ಲಿ ರೈತಗೀತೆ ಹಾಡಿಸಬೇಕು ಎಂದು ಕೇಳಿಕೊಂಡರು. ಅದರಂತೆ ಹಾಡನ್ನು ಅವರ ಬಳಿಯ ಹಾಡಿಸಲಾಗಿದ್ದು, ಹಾಡು ತುಂಬಾ ಸೊಗಸಾಗಿ ಬಂದಿದೆ ಅಂದರು.
ನಂತರ ನಿರ್ಮಾಪಕ ಹಾಗೂ ನಿರ್ದೇಶಕ ಹಾಸನ್ ರಮೇಶ್ ಮಾತನಾಡುತ್ತಾ, ಇದು ಕೇವಲ ರೈತರ ಸಿನಿಮಾ ಮಾತ್ರವಲ್ಲ. ಎಲ್ಲ ಅಂಶವನ್ನೊಳಗೊಂಡ ಸಿನಿಮಾ. ದೇಶದಲ್ಲಿ ಶೇ.80ರಷ್ಟು ರೈತರಿರುವ ಹಾಗೆ ಕಥೆ ಮಾಡಲಾಗಿದೆ. ಇದು ಸಂಗೀತಮಯ ಸಿನಿಮಾ. 8 ಗೀತೆಗಳ ಜೊತೆಗೆ ಒಗಟು, ಗಾದೆಗಳು ಇವೆ ಎಂದರು.
ಯುವ ಪ್ರತಿಭೆ ಕ್ರಾಂತಿ ಮಾತನಾಡುತ್ತಾ, ಈ ಚಿತ್ರದ ಕಥೆ ಬಹಳ ಗಟ್ಟಿಯಾಗಿದೆ. ಇದು ಸಮಾಜಕ್ಕೆ ಮಾದರಿ ಚಿತ್ರವಾಗಿ ಹೊರ ಬರಲಿದೆ. ಈ ಚಿತ್ರದಲ್ಲಿ ಆ್ಯಕ್ಷನ್, ಲವ್, ಸೆಂಟಿಮೆಂಟ್ ಡ್ರಾಮಾ ಹೀಗೆ ಎಲ್ಲಾ ಇದೆ. 5-6 ವರ್ಷದ ಶ್ರಮ ಈ ಚಿತ್ರಕ್ಕೆ ಇದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನವನ್ನು ಹಾಸನ ರಮೇಶ್ ಮಾಡಿದ್ದಾರೆ ಎಂದರು.
ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್ನಿಂದ ಹೊಸ ಸಿನಿಮಾ: ಪವನ್ - ಫಹಾದ್ ಕಾಂಬಿನೇಶನ್ನಲ್ಲಿ ಬರಲಿದೆ 'ಧೂಮಂ'
ಮರಾಠಿ ಬೆಡಗಿ ವೈಷ್ಣವಿ ಪಟವರ್ಧನ್, ವೈಷ್ಣವಿ ಚಂದ್ರನ್ ಮೆನನ್, ರಾಜು ತಾಳಿಕೋಟೆ, ಕಲ್ಯಾಣಿ, ರಮೇಶ್ ಭಟ್, ರವಿಶಂಕರ್ ಗೌಡ, ಸಾಧು ಕೋಕಿಲ, ಚರಣ್ ರಾಜ್, ಗಿರಿ, ಕುರಿಬಾಂಡ್ ರಂಗ, ಬ್ಯಾಂಕ್ ಮಂಜಣ್ಣ, ಬಸುರಾಜ್ ಹಾಸನ್ ಹಾಗೂ ಮುಂತಾದವರು ಅಭಿನಯಿಸಿದ್ದಾರೆ. ಹಂಸಲೇಖ ಸಂಗೀತ ಹಾಗೂ ಸಾಹಿತ್ಯ ನೀಡಿದ್ದು, ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ, ವಿಜಯ್ ಪ್ರಕಾಶ್, ನವೀನ್ ಸಜ್ಜು, ಅಜಯ್ ವಾರಿಯರ್, ರಘು, ಅಂಕಿತಾ ಕುಂಡು, ಅಮ್ರಪಾಲಿ ಮುಂತಾದವರು ಹಾಡಿದ್ದಾರೆ.
ರವಿಕುಮಾರ್ ಸನಾ ಹಾಗೂ ಕೆ.ಎಂ. ವಿಷ್ಣುವರ್ಧನ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಪ್ರೊ. ಅರವಿಂದ ಮಾಲಗತ್ತಿ ಸಾಹಿತ್ಯ, ಮಾಸ್ ಮಾದ ಸಾಹಸ, ಮದನ್ ಹರಿಣಿ ಹಾಗೂ ಮೋಹನ್ ನೃತ್ಯ, ಪಳನಿ ಸೌಂಡ್ ಇಂಜನಿಯರ್ ಆಗಿ ಕೆಲಸ ಮಾಡಿದ್ದಾರೆ. ಗೋಲ್ಡನ್ ರೈನ್ ಮೂವೀಸ್ ಮೂಲಕ ಜಿ .ನಾರಾಯಣಪ್ಪ ವಿ. ಸಂಜಯ್ ಬಾಬು ಹಾಗೂ ಹಾಸನ್ ರಮೇಶ್ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: ಕಾನನದೊಳಗಿನ ದಂತಕಥೆ..ಕಾಂತಾರದಲ್ಲಿ ಕರಾವಳಿ ಸೊಗಡು - ಹೊಸ ಅವತಾರದಲ್ಲಿ ರಿಶಬ್ ಶೆಟ್ಟಿ ಅಬ್ಬರ