ಮ್ಯಾಸಿವ್ ಸ್ಟಾರ್ ರಾಜವರ್ಧನ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಮಾಸ್ ಆ್ಯಕ್ಷನ್ ಸಿನಿಮಾ 'ಗಜರಾಮ'ನ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇತ್ತೀಚೆಗೆ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಮೂಲಕ ಗಮನ ಸೆಳೆದ ಚಿತ್ರತಂಡ ಈಗ ಸಿನಿಮಾದ ಆ್ಯಕ್ಷನ್ ಸೀನ್ ಶೂಟಿಂಗ್ನಲ್ಲಿ ಬ್ಯುಸಿಯಾಗಿದೆ.
ರಾಜವರ್ಧನ್ ಹಾಗೂ ತೆಲುಗಿನ ಖ್ಯಾತ ಖಳ ನಟ ಕಬೀರ್ ಸಿಂಗ್ ನಡುವಿನ ಹೈ ವೋಲ್ಟೇಜ್ ಆ್ಯಕ್ಷನ್ ಸೀನ್ ಚಿತ್ರೀಕರಣ ಬೆಂಗಳೂರಿನ ಹೆಚ್ಎಂಟಿಯಲ್ಲಿ ನಡೆಯುತ್ತಿದೆ. ರಾಜವರ್ಧನ್ ಜೊತೆ ಕಬೀರ್ ಸಿಂಗ್ ಕಾಳಗ ಜೋರಾಗಿದ್ದು, ಹತ್ತು ದಿನಗಳಿಂದ ಸಾಹಸ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿದೆ.
ಈ ವೇಳೆ ಮಾತನಾಡಿದ ಖಳ ನಟ ಕಬೀರ್ ಸಿಂಗ್, ಚಿತ್ರದಲ್ಲಿ ನನ್ನ ಪಾತ್ರ ಇಷ್ಟವಾಯಿತು. ರೌಡಿ ಪಾತ್ರ ನನ್ನದು. ಬೇರೆ ಭಾಷೆಯಿಂದ ಇಲ್ಲಿಗೆ ಬಂದಿದ್ದೇನೆ. ಸಿನಿಮಾಗೆ ಭಾಷೆಗಳ ಮಿತಿಯಿಲ್ಲ. ಸದ್ಯ ಹಿಂದಿ ವೆಬ್ ಸೀರಿಸ್ನಲ್ಲೂ ನಟಿಸುತ್ತಿದ್ದೇನೆ. ಯಾವ ಭಾಷೆಯಾದರೂ ನಾನು ನಟಿಸುತ್ತೇನೆ. 'ಗಜರಾಮ' ಸಿನಿಮಾ ಮೇಲೆ ಅಪಾರ ನಿರೀಕ್ಷೆ ಇದೆ ಎಂದು ತಿಳಿಸಿದ್ರು.
ನಾಯಕ ನಟ ರಾಜವರ್ಧನ್ ಮಾತನಾಡಿ, ಚಿತ್ರತಂಡ ಸಾಹಸ ದೃಶ್ಯಗಳನ್ನು ಸೆರೆ ಹಿಡಿಯುವುದರಲ್ಲಿ ಬ್ಯುಸಿಯಾಗಿದೆ. ನನ್ನ ಪಾತ್ರ ತುಂಬಾ ಚೆನ್ನಾಗಿದೆ. ಒಳ್ಳೆಯ ಕಥೆ ಹಾಗೂ ಒಳ್ಳೆ ಪ್ರೊಡಕ್ಷನ್ ಹೌಸ್ ಸಿಕ್ಕಿರೋರು ಖುಷಿಯಿದೆ. ಇದು ಪಕ್ಕಾ ಕಮರ್ಶಿಯಲ್ ಸಿನಿಮಾ. ನಿರ್ದೇಶಕರು ಹೇಳಿದ್ದನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದೇನೆ ಎಂದು ಸಿನಿಮಾ ಬಗ್ಗೆ ಸಂತಸ ಹಂಚಿಕೊಂಡ್ರು.
ಚಿತ್ರದ ನಿರ್ದೇಶಕ ಸುನೀಲ್ ಕುಮಾರ್ ಮಾತನಾಡಿ, ನಾನು ಅಂದುಕೊಂಡ ಹಾಗೆ ಅಚ್ಚುಕಟ್ಟಾಗಿ ಸಿನಿಮಾ ಮೂಡಿ ಬಂದಿದೆ. ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುವೆ. ಗಜರಾಮ ಮಾಸ್ ಸಿನಿಮಾ. ಈ ಸಿನಿಮಾದಲ್ಲಿ ಸಂದೇಶ ಇದೆ. ಕ್ಲೈ ಮ್ಯಾಕ್ಸ್ ಫೈಟಿಂಗ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದ್ರು.
ಚಿತ್ರದ ಸಾಹಸ ದೃಶ್ಯಗಳಲ್ಲಿ ಭಾಗಿಯಾದ ನಟ ದೀಪಕ್ ಮಾತನಾಡಿ, ಚಿತ್ರದಲ್ಲಿ ಪೊಲೀಸ್ ಪಾತ್ರ ನಿರ್ವಹಿಸುತ್ತಿದ್ದೇನೆ, ಸೆಕೆಂಡ್ ಲೀಡ್ ಕ್ಯಾರೆಕ್ಟರ್ ನನ್ನದು. ಪೂರ್ತಿ ಸಿನಿಮಾದಲ್ಲಿ ನಾನಿರುತ್ತೇನೆ ಎಂದು ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡ್ರು.
ಇದನ್ನೂ ಓದಿ: ಪರಿಮಳ ಡಿಸೋಜಾ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಿದ ಮೂವರು ಮಾಜಿ ಮುಖ್ಯಮಂತ್ರಿಗಳು
'ಗಜರಾಮ' ಚಿತ್ರಕ್ಕೆ ಮನೋಮೂರ್ತಿ ಸಂಗೀತ, ಕೆ.ಎಸ್.ಚಂದ್ರಶೇಖರ್ ಛಾಯಾಗ್ರಾಹಣ, ಜ್ಞಾನೇಶ್ ಬಿ ಮಠದ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ. ಲೈಫ್ ಲೈನ್ ಫಿಲ್ಮ್ ಪ್ರೊಡಕ್ಷನ್ ನಡಿ ನರಸಿಂಹ ಮೂರ್ತಿ ಚಿತ್ರವನ್ನು ನಿರ್ಮಾಣ ಮಾಡ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝವೀಯರ್ ಫರ್ನಾಂಡಿಸ್ ಕೂಡ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.