'ಕನ್ನಡತಿ' ಧಾರಾವಾಹಿಯ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ ನಟ ಕಿರಣ್ ರಾಜ್ ಅಭಿನಯದ 'ರಾನಿ' ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಸಿನಿಮಾದಲ್ಲಿ ಕಿರಣ್ ರಾಜ್ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿದೆ.
ಈಗಾಗಲೇ ಹಲವು ವಿಶೇಷತೆಗಳ ಮೂಲಕ ಚಿತ್ರ ಸುದ್ದಿಯಲ್ಲಿದೆ. ಟೈಟಲ್ ಅನ್ನು ವಿಭಿನ್ನವಾಗಿಯೇ ಬಿಡುಗಡೆ ಮಾಡುವ ಮೂಲಕ ಸಿನಿಮಾ ಗಮನ ಸೆಳೆದಿತ್ತು. ಕಿರಣ್ ರಾಜ್ 13,000 ಅಡಿ ಎತ್ತರದಿಂದ ಜಿಗಿದು ಚಿತ್ರದ ಶೀರ್ಷಿಕೆ ಬಿಡುಗಡೆಗೊಳಿಸಿ ಅಭಿಮಾನಿಗಳು, ಪ್ರೇಕ್ಷಕರ ಹುಬ್ಬೇರಿಸುವಂತೆ ಮಾಡಿದ್ದರು.
ಇದೀಗ ರಗಡ್ ಲುಕ್ನಲ್ಲಿ ನಟ ಹರ್ಷ ಕಂಡು ಬಂದಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಷ್ಟು ದಿನ ಲವರ್ ಬಾಯ್ ಆಗಿ ಅಭಿನಯಿಸುತ್ತಿದ್ದ ಕಿರಣ್ ರಾಜ್, ಇದೀಗ ರಕ್ತಸಿಕ್ತ ಕೈಯಲ್ಲಿ ಸಿಗರೇಟ್ ಹಿಡಿಯುವ ಮೂಲಕ ಸಂಪೂರ್ಣವಾಗಿ ಆ್ಯಕ್ಷನ್ ಹೀರೋ ಆಗಿದ್ದಾರೆ.
ಸ್ಟಾರ್ ಕ್ರಿಯೇಷನ್ಸ್ ಮೂಲಕ ಚಂದ್ರಕಾಂತ್ ಪೂಜಾರಿ, ಉಮೇಶ್ ಹೆಗ್ಡೆ ನಿರ್ಮಾಣ ಹೊಣೆ ಹೊತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಗುರುತೇಜ್ ಶೆಟ್ಟಿ ನಿರ್ವಹಿಸಿದ್ದಾರೆ. ಗುರುತೇಜ್ ಮತ್ತು ಕಿರಣ್ ರಾಜ್ ಕಾಂಬಿನೇಷನ್ನ ಎರಡನೇ ಚಿತ್ರವಿದು. ಈ ಹಿಂದೆ ಈ ಇಬ್ಬರು ಒಟ್ಟಿಗೆ ಬಡ್ಡೀಸ್ ಚಿತ್ರದಲ್ಲಿ ಕೆಲಸ ಮಾಡಿದ್ದರು.
ಇದೊಂದು ಮಾಸ್ ಚಿತ್ರ. ಕಿರಣ್ ರಾಜ್ ಚಿತ್ರದಲ್ಲಿ ಭರ್ಜರಿ ಫೈಟ್ಸ್ ಮಾಡಿದ್ದಾರಂತೆ. 6 ಸಾಹಸ ಸನ್ನಿವೇಶಗಳಿವೆ. ಒಟ್ಟು 7 ಸೆಟ್‌ಗಳನ್ನು ಹಾಕಲಾಗಿದೆ. ಈಗಾಗಲೇ 5 ಸೆಟ್‌ಗಳಲ್ಲಿ ಚಿತ್ರೀಕರಣ ಮುಗಿಸಲಾಗಿದೆ. ನಟರಾದ ರವಿಶಂಕರ್, ಮೈಕೋ ನಾಗರಾಜ್, ನಾಗತಿಹಳ್ಳಿ ಚಂದ್ರಶೇಖರ್, ಬಿ.ಸುರೇಶ, ಉಗ್ರಂ ಮಂಜು, ಉಗ್ರಂ ರವಿ, ಧರ್ಮಣ್ಣ, ಸೂರ್ಯ ಕುಂದಾಪುರ, ಗಿರೀಶ್ ಹೆಗ್ಡೆ, ಪೃಥ್ವಿರಾಜ್, ಯಶ್ ಶೆಟ್ಟಿ, ಉಮೇಶ್, ಸುಜಯ್ ಶಾಸ್ತ್ರಿ, ಲಕ್ಷ್ಮಿ ಸಿದ್ದಯ್ಯ, ಸಂದೀಪ್ ಮಲಾನಿ, ಅನಿಲ್, ಧರ್ಮೆಂದ್ರ ಆರಸ್, ಮನಮೋಹನ್ ರೈ ತಾರಾಗಣದಲ್ಲಿದ್ದಾರೆ.
ಪ್ರಮೋದ್ ಮರವಂತೆ ನಾಲ್ಕು ಹಾಡುಗಳನ್ನು ಬರೆದಿದ್ದು, ಮಣಿಕಾಂತ್ ಕದ್ರಿ ಸಂಗೀತವಿದೆ. ಮೂವರು ನಾಯಕಿಯರಿದ್ದಾರೆ. ಕನ್ನಡತಿಯಲ್ಲಿ ಕಂಡಿದ್ದ ಹರ್ಷನಿಗೆ ವಿರುದ್ಧವಾಗಿ ಪಕ್ಕಾ ಮಾಸ್ ಫೈಟರ್ ಆಗಿ ನಟ ಕಿರಣ್ ರಾಜ್ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಶೇ 60 ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಡಿಸೆಂಬರ್ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
ಇದನ್ನೂ ಓದಿ: ನಿಮ್ಮ ಗೆಸ್ ರಾಂಗ್! ಹರಿಪ್ರಿಯಾ ಸರ್ಪ್ರೈಸ್ ಏನ್ ಗೊತ್ತಾ?