ಕನ್ನಡ ಚಿತ್ರರಂಗದಲ್ಲಿ ಅದ್ಧೂರಿ ಮೇಕಿಂಗ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾಗಳ ಮಧ್ಯೆ ಉತ್ತಮ ಕಂಟೆಂಟ್ ಇರುವ ಚಿತ್ರಗಳು ಸಿನಿಮಾ ಪ್ರೇಮಿಗಳನ್ನು ಸೆಳೆಯುತ್ತಿದೆ. ಇದೀಗ ಇಲ್ಲೊಂದು ಚಿತ್ರತಂಡ 'ರಾವೆನ್' ಅಂತ ಶೀರ್ಷಿಕೆ ಇಟ್ಟುಕೊಂಡು ಕಾಗೆ ಬಗೆಗಿನ ಕಥೆ ಹೇಳೋದಕ್ಕೆ ಸಜ್ಜಾಗಿದೆ. ಈ ಚಿತ್ರಕ್ಕೆ ಯುವ ನಿರ್ದೇಶಕ ವೇದ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು.
ಶಾಸಕ ಗೋಪಾಲಯ್ಯ 'ರಾವೆನ್' ಮೊದಲ ದೃಶ್ಯಕ್ಕೆ ಆರಂಭ ಫಲಕ ತೋರಿದರು. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ. ಹರೀಶ್, ನಿರ್ದೇಶಕ ಎಂ ಡಿಶ್ರೀಧರ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.
ಬಳಿಕ ಮಾತು ಆರಂಭಿಸಿದ ನಿರ್ದೇಶಕ ವೇದ್, "ರಾವೆನ್' ಎಂಬುದು ಕಾಗೆಯ ಹೆಸರು. ಸಾಮಾನ್ಯವಾಗಿ ಕಾಗೆ ನಮ್ಮನ್ನು ತಾಕಿದರೆ ಸ್ನಾನ ಮಾಡಬೇಕು. ಅದು ವಾಹನಗಳ ಮೇಲೆ ಕೂರಬಾರದು. ಹೀಗೆ ಮುಂತಾದ ಮೂಢನಂಬಿಕೆಗಳು ರೂಡಿಯಲ್ಲಿವೆ. ಆದರೆ ನಮ್ಮ ಸಿನಿಮಾದಲ್ಲಿ ಕಾಗೆಯೇ ಪ್ರಮುಖ ಪಾತ್ರಧಾರಿ. ಈ ಚಿತ್ರದಿಂದ ಕಾಗೆಯಿಂದ ಸಾಕಷ್ಟು ಒಳ್ಳೆಯದಾಗುತ್ತದೆ ಎಂಬುದನ್ನು ತೋರಿಸುತ್ತಿದ್ದೇವೆ" ಎಂದು ತಿಳಿಸಿದರು.
ಮುಂದುವರೆದು, "ಚಿತ್ರದಲ್ಲಿ ದಿಲೀಪ್ ಪೈ ನಾಯಕನಾಗಿ ನಟಿಸುತ್ತಿದ್ದಾರೆ. ಸ್ವಪ್ನ ಶೆಟ್ಟಿಗಾರ್ ಮತ್ತು ಕುಂಕುಮ ನಾಯಕಿಯರು. ಲೀಲಾ ಮೋಹನ್, ಸುಚೇಂದ್ರ ಪ್ರಸಾದ್, ಶ್ರೇಯಾ ಆರಾಧ್ಯ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ನಾನು ಎಂ.ಡಿ ಶ್ರೀಧರ್ ಅವರು ಸೇರಿದಂತೆ ಅನೇಕರ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಇದು ನನ್ನ ನಿರ್ದೇಶನದ ಎರಡನೇ ಚಿತ್ರ" ಎಂದರು.
ಇದನ್ನೂ ಓದಿ: ಸೆಪ್ಟೆಂಬರ್ ಕೊನೆಯಲ್ಲಿ ಈ 3 ಸಿನಿಮಾಗಳು ತೆರೆಗೆ
ನಂತರ ನಟ ದಿಲೀಪ್ ಪೈ ಮಾತನಾಡಿ, "ಬಹಳ ದಿನಗಳ ನಂತರ ಒಂದೊಳ್ಳೆ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಒಳ್ಳೆಯ ಪಾತ್ರ. ಕಾಗೆ ಶನಿಮಹಾತ್ಮನ ವಾಹನ. 'ರಾವೆನ್' ಕಾಗೆ ಕುರಿತಾದ ಚಿತ್ರವಿದು. ಈ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳು ಕಾಗೆಯ ಜೊತೆ ಕನೆಕ್ಟ್ ಆಗುತ್ತದೆ" ಎಂದು ಹೇಳಿದರು.
ನಾನು ಕನ್ನಡಪರ ಹೋರಾಟಗಾರ ಎಂದು ಮಾತು ಆರಂಭಿಸಿದ ನಿರ್ಮಾಪಕ ವಿಶ್ವನಾಥ್, "ವೇದ್ ಅವರು ಮಾಡಿಕೊಂಡಿರುವ ಕಥೆ ಇಷ್ಟವಾಯಿತು. ಹಾಗಾಗಿ ಪ್ರಬಿಕ್ ಮೊಗವೀರ್ ಅವರೊಂದಿಗೆ ಸೇರಿ ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ನನ್ನ ಹುಟ್ಟುಹಬ್ಬದ ದಿನವೇ ಚಿತ್ರ ಆರಂಭವಾಗಿರುವುದು ಮತ್ತಷ್ಟು ಖುಷಿ ತಂದಿದೆ" ಎಂದರು.
"ನಾನು ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಸಾಕಷ್ಟು ಪ್ರಾಣಿಗಳ ಕುರಿತಾದ ಚಿತ್ರವನ್ನೇ ಮಾಡಿದ್ದೇನೆ. ಈ ಚಿತ್ರ ಕೂಡ ಕಾಗೆಯ ಬಗ್ಗೆ ಇದೆ" ಎಂದು ನಿರ್ಮಾಪಕ ಪ್ರಬಿಕ್ ಮೊಗವೀರ್ ಹೇಳಿದರು. ವಿಶ್ವ ಪ್ರೊಡಕ್ಷನ್ಸ್ ಹಾಗೂ ಆತ್ಮ ಸಿನಿಮಾಸ್ ಲಾಂಛನದಲ್ಲಿ ವಿಶ್ವನಾಥ್ ಜಿ ಪಿ ಹಾಗೂ ಪ್ರಬಿಕ್ ಮೊಗವೀರ್ ಅವರು ನಿರ್ಮಿಸುತ್ತಿರುವ 'ರಾವೆನ್' ಚಿತ್ರದ ಶೂಟಿಂಗ್ ಈ ತಿಂಗಳ 21ರಿಂದ ಆರಂಭವಾಗಲಿದೆ.
ಇದನ್ನೂ ಓದಿ: ಶರಣ್ ನಟನೆಯ 'ಛೂ ಮಂತರ್' ಚಿತ್ರದ ಟೈಟಲ್ ಟ್ರ್ಯಾಕ್ ಅನಾವರಣಗೊಳಿಸಿದ ಕ್ರೇಜಿಸ್ಟಾರ್