ಕನ್ನಡ ಚಿತ್ರರಂಗದಲ್ಲಿ ವಾಯುಪುತ್ರ, ಯುವ ಸಾಮ್ರಾಟ್ ಎಂದು ಕರೆಸಿಕೊಂಡಿದ್ದ ನಟ ಚಿರಂಜೀವಿ ಸರ್ಜಾ. ಚಿತ್ರರಂಗದಲ್ಲಿ ಮಾಸ್ ಇಮೇಜ್ ಕ್ರಿಯೇಟ್ ಮಾಡಿಕೊಂಡಿದ್ದ ಇವರ ಅಕಾಲಿಕ ನಿಧನ ಕರುನಾಡ ಜನರಿಗೆ ಕಣ್ಣೀರು ತರಿಸಿತ್ತು. ಚಿರು ತಮ್ಮ ನಿಧನಕ್ಕೂ ಮುನ್ನ 'ರಾಜಮಾರ್ತಾಂಡ' ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದರು. ಈ ಸಿನಿಮಾ ನಾಳೆ (ಅ.6) ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಣ್ಣನ ಅನುಪಸ್ಥಿತಿಯಲ್ಲಿ ಧ್ರುವ ಸರ್ಜಾ ಸಿನಿಮಾದ ಭರ್ಜರಿ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ.
ಚಿತ್ರಕ್ಕೆ ಧ್ರುವ ಸರ್ಜಾ ಅಲ್ಲದೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ, ನಟರಾದ ದರ್ಶನ್, ನೆನಪಿರಲಿ ಪ್ರೇಮ್, ಶರಣ್, ನಟಿ ತಾರ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ. ಇದೀಗ ಬಹುಭಾಷಾ ನಟ, ಚಿರು ಅವರ ಸೋದರ ಮಾವ 'ರಾಜಮಾರ್ತಾಂಡ' ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿ ಎಂದು ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ.
ನಮ್ಮ ಮನೆಯ ರಾಜಕುಮಾರ ಮತ್ತು ನಿಮ್ಮೆಲ್ಲರ ಪ್ರೀತಿಯ ಚಿರು ಸರ್ಜಾ ನಟಿಸಿದ ಚಿತ್ರ 'ರಾಜಮಾರ್ತಾಂಡ' ಈಗ ಬಿಡುಗಡೆಗೆ ಸಿದ್ಧವಾಗಿದೆ. ಅಕ್ಟೋಬರ್ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕರಿಗೂ, ನಿರ್ದೇಶಕರಿಗೂ ಹಾಗೂ ಎಲ್ಲಾ ಕಲಾವಿದರಿಗೂ, ತಾಂತ್ರಿಕ ವರ್ಗದವರಿಗೂ, ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು. ಚಿರು ಮತ್ತು ಧ್ರುವ ಇಬ್ಬರು ಸೇರಿ ಒಂದು ಸಿನಿಮಾ ಮಾಡಬೇಕು ಅಂತ ನನಗೆ ಆಸೆಯಿತ್ತು. ಅದು ಸಾಧ್ಯವಾಗಿರಲಿಲ್ಲ. ಆದರೆ ಈ ಸಿನಿಮಾದಲ್ಲಿ ಕನಸು ನಿಜವಾದಂತಿದೆ. ಚಿತ್ರದಲ್ಲಿ ಅಣ್ಣನಿಗೆ ತಮ್ಮನೇ ಕಂಠದಾನ ಮಾಡಿದ್ದಾನೆ. ಚಿರು ಅಭಿನಯ, ಧ್ರುವನ ಕಂಠ. ಚಿತ್ರ ನೋಡುವಾಗ ನಮಗೆ ಇಬ್ಬರನ್ನು ಸೇರಿ ನೋಡಿದ ರೀತಿಯೇ ಫೀಲ್ ಇರುತ್ತದೆ. ಹಾಗಾಗಿ ಪ್ರತಿಯೊಬ್ಬರು ಈ ಸಿನಿಮಾನ ನೋಡಿ. ನಿಮ್ಮ ಪ್ರೀತಿ ಸಹಕಾರ ಯಾವಾಗಲೂ ಈ ಸಿನಿಮಾ ಮೇಲೆ ಇರಬೇಕು. - ನಟ ಅರ್ಜುನ್ ಸರ್ಜಾ
'ರಾಜಮಾರ್ತಾಂಡ' ಸಿನಿಮಾದ ಚಿತ್ರೀಕರಣ ಚಿರು ನಿಧನಕ್ಕೂ ಮುನ್ನವೇ ಪೂರ್ಣಗೊಂಡಿತ್ತು. ಆದರೆ ಡಬ್ಬಿಂಗ್ ಮಾತ್ರ ಬಾಕಿಯಿತ್ತು. ಚಿರಂಜೀವಿ ಪಾತ್ರಕ್ಕೆ ಸಹೋದರ ಧ್ರುವ ಸರ್ಜಾ ಡಬ್ಬಿಂಗ್ ಮಾಡಿದ್ದಾರೆ. ಇದರ ಜೊತೆಗೆ ರಾಜಮಾರ್ತಾಂಡದಲ್ಲಿ ನಟ ದರ್ಶನ್ ಅವರ ಧ್ವನಿ ಸಹ ಕೇಳಬಹುದು. ಇದು ಈ ಚಿತ್ರಕ್ಕೆ ದೊಡ್ಡ ಮಟ್ಟದ ಪ್ಲಸ್ ಪಾಯಿಂಟ್ ಅಂತಲೇ ಹೇಳಬಹುದು. ಚಿತ್ರದ ಟೀಸರ್ ಈಗಾಗಲೇ ರಿಲೀಸ್ ಆಗಿದ್ದು, ಇದು ರಾಜಮನೆತನದ ಕಥೆ ಅನ್ನೋದು ಗೊತ್ತಾಗುತ್ತೆ.
ಚಿತ್ರತಂಡ: ನಾಯಕಿಯರಾಗಿ ದೀಪ್ತಿ ಸಾತಿ, ಮೇಘಶ್ರೀ, ತ್ರಿವೇಣಿ (ಟಗರು) ಅಭಿನಯಿಸಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್, ವಿನೀತ್ ಕುಮಾರ್ (ಬಾಂಬೆ) ಮುಂತಾದವರು ತಾರಾಬಳಗದಲ್ಲಿದ್ದಾರೆ. ಗೀತರಚನೆಕಾರರಾಗಿ ಜನಪ್ರಿಯರಾಗಿರುವ ಜೆ.ಕೆ.ರಾಮನಾರಾಯಣ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.
ಶ್ರೀ ಮಾದೇಶ್ವರ ಪ್ರೊಡಕ್ಷನ್ಸ್ ಮೂಲಕ ಪ್ರಣವ್ ಗೌಡ.ಎನ್, ನಿವೇದಿತಾ ಹಾಗೂ ಶಿವಕುಮಾರ್ ಅದ್ಧೂರಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಸುಮಧುರವಾದ ನಾಲ್ಕು ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಧರ್ಮವಿಶ್ ಹಿನ್ನೆಲೆ ಸಂಗೀತ 'ರಾಜಮಾರ್ತಾಂಡ'ನ ವೈಭವ ಹೆಚ್ಚಿಸಿದೆ. ಜೆ.ಕೆ.ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಯು ಡಿ ವಿ ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಹರ್ಷ ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ.
ಇದನ್ನೂ ಓದಿ: ಈ ವಾರ ಸಾಲು ಸಾಲು ಸಿನಿಮಾಗಳು ಬಿಡುಗಡೆ; ಕೊನೆ ಬಾರಿ ತೆರೆ ಮೇಲೆ 'ಚಿರು' ನೋಡೋ ಅವಕಾಶ