ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಎಂಟೂವರೆ ವರ್ಷಗಳಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸಕ್ಕೆ ನಾನು ಮನಸೋತಿದ್ದೇನೆ. ಅಲ್ಲದೆ, ಅವರ ಭಕ್ತ ಎಂದು ಹೇಳಿಕೊಳ್ಳುವುದಕ್ಕೆ ಯಾವುದೇ ಸಂಕೋಚವಿಲ್ಲ ಎಂದು ನಟ ಅನಂತನಾಗ್ ತಿಳಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ನಗರದ ಪ್ರೆಸ್‌ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ‘ರಾಷ್ಟ್ರ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ’ ಎಂಬ ವಿಷಯದ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಅಹ್ವಾನ ನೀಡುವುದಕ್ಕೆ ಬಂದಿದ್ದ ಸಂದರ್ಭದಲ್ಲಿ ಇದು ಮೋದಿ ಅವರು ತಂದಿರುವ ಯಾವುದೇ ಹೊಸ ಕಾರ್ಯಕ್ರಮ ಎಂದು ತಿಳಿದಿದ್ದೆ ಎಂದರು.
ಮಾಧ್ಯಮಗಳು ಹೀಗೆ ನಡೆಯಬೇಕು ಅಂತ ಸರ್ಕಾರಗಳು ತೀರ್ಮಾನ ಮಾಡಬೇಕೆ ಎಂದು ಪ್ರಶ್ನೆಗೆ ಉತ್ತರಿಸಿದ ಅವರು, ಹೊಸ ಹೊಸ ಪೀಳಿಗೆಯ ಮಾಧ್ಯಮಗಳು ಹೇಗಿರಬೇಕು ಅಂತಾ ಮಾಧ್ಯಮದವರೇ ತೀರ್ಮಾನಿಸಬೇಕು ಎಂದು ಉತ್ತರಿಸಿದರು.
ಏನನ್ನು ಮಾಡಬೇಕು ಎಂಬುದನ್ನು ಮಾಧ್ಯಮಗಳು ತಿಳಿಸಬೇಕು: ಸಮಾಜ ಏನನ್ನು ಮಾಡಬಾರದು ಎಂಬುದನ್ನು ಹೇಳುವುದಕ್ಕೆ ಬದಲಾಗಿ ಏನನ್ನು ಮಾಡಬೇಕು ಎಂಬುದನ್ನು ತಿಳಿಸುವುದು ಮಾಧ್ಯಮಗಳ ಕರ್ತವ್ಯವಾಗಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಪತ್ರಿಕೆಗಳ ಸಂಪಾದಕೀಯವನ್ನು ಓದಿಯೇ ಮನೆಯಿಂದ ಹೊರಡುತ್ತಿದ್ದೆವು. ಪ್ರಸ್ತುತ ಕಾಲ ಬದಲಾಗಿದೆ. ದೇಶ ಕಟ್ಟುವ ಕೆಲಸ ಮರೆತಿದ್ದು, ಪತ್ರಿಕೆಗಳ ಪ್ರಸಾರ ಸಂಖ್ಯೆ ಹೆಚ್ಚು ಮಾಡಿಕೊಳ್ಳುವುದೇ ಉದ್ದೇಶವಾಗಿಸಿಕೊಂಡಿದ್ದಾರೆ. ಬಂದ ವರದಿಯನ್ನು ಪರಾಮರ್ಶೆಗೊಳಪಡಿಸಬೇಕು. ತನಿಖಾ ವರದಿಗಾರಿಕೆ ಮಾಡಬೇಕು ಎಂದು ಅವರು ಮಾಧ್ಯಮಗಳಿಗೆ ಕಿವಿಮಾತು ಹೇಳಿದರು.
ದೇಶದಲ್ಲಿ ಒಗ್ಗಟ್ಟನ್ನು ಕಾಪಾಡುವ ಕೆಲಸ ಮಾಧ್ಯಮಗಳು ಮಾಡಬೇಕು. ಎಷ್ಟೇ ಬಲಿಷ್ಟವಾದ ಕಟ್ಟಿಗೆಯನ್ನು ಬೇಕಾದ್ರೂ ಮುರಿಯಬಹುದು. ಆದರೆ, ಪೊರಕೆಯನ್ನು ಇಲ್ಲಿವರೆಗೆ ಯಾರೂ ಮುರಿಯಲು ಸಾಧ್ಯವಾಗಿಲ್ಲ. ಇದೇ ಕಾರಣಕ್ಕೆ ಒಗ್ಗಟ್ಟು ಇರಬೇಕು ಎಂದು ಅವರು ವಿವರಿಸಿದರು.
ಪ್ರಸ್ತುತದ ಯುಗವನ್ನು ಪ್ರಚಾರ ಯುಗ ಎಂದು ಕರೆಯಲಾಗುತ್ತಿದೆ. ಒಂದೇ ವಿಚಾರವನ್ನು ಹತ್ತು ಬಾರಿ ಹೇಳಿದಲ್ಲಿ ಜನ ನಂಬುವಂತಹ ಪರಿಸ್ಥಿತಿ ಇದೆ. ಸುಳ್ಳನ್ನು ನಿಜ ಮಾಡಬಹುದು, ನಿಜವನ್ನು ಸುಳ್ಳು ಮಾಡಬಹುದು. ಇದೆಲ್ಲವೂ ಮಾಧ್ಯಮಗಳ ಕೈಯಲ್ಲಿ ಇದೆ ಎಂದು ಹೇಳಿದರು.
ಸ್ವಾತಂತ್ರ್ಯದ ಸಂದರ್ಭದಲ್ಲಿ ಮಾಧ್ಯಮಗಳ ಪಾತ್ರ ಇತ್ತು. ಗಾಂಧೀಜಿ ಕೇವಲ ರಾಜಕೀಯ ಸ್ವಾತಂತ್ರ್ಯ ಮಾತ್ರ ಬಯಸಲಿಲ್ಲ. ಎಲ್ಲ ರೀತಿಯ ಸ್ವಾತಂತ್ರ್ಯ ನನ್ನ ಉದ್ದೇಶ ಎಂದು ಹೇಳುತ್ತಿದ್ದರು ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಶೈಲೇಶ ಚಂದ್ರ ಗುಪ್ತ, ಪ್ರೆಸ್ಕ್ಲಬ್ನ ಅಧ್ಯಕ್ಷ ಸದಾಶಿವ ಶೆಣೈ ಸೇರಿದಂತೆ ಇತರರು ಉಪಸ್ಥಿತರಿದ್ದರು.