'ಅವನೇ ಶ್ರೀಮನ್ನಾರಾಯಣ' ಬಳಿಕ ರಕ್ಷಿತ್ ಶೆಟ್ಟಿ ಅಭಿನಯಿಸಿರುವ ಬಹುನಿರೀಕ್ಷಿತ ಸಿನಿಮಾ ಚಾರ್ಲಿ 777. ದೆಹಲಿ, ಮುಂಬೈ, ಅಹಮದಾಬಾದ್ ಹಾಗು ಅಮೃತಸರಗಳಲ್ಲಿ ಪ್ರೀಮಿಯರ್ ಶೋ ನೋಡಿದ ಶ್ವಾನಪ್ರಿಯರು ಹಾಗೂ ಸಿನಿಮಾಪ್ರಿಯರು ಚಿತ್ರವನ್ನು ಬಹಳವಾಗಿ ಮೆಚ್ಚಿಕೊಂಡಿದ್ದಾರೆ. ಇದೇ ಜೂನ್ 10ರಂದು ಕರ್ನಾಟಕ ಮಾತ್ರವಲ್ಲದೇ ಬೇರೆ ರಾಜ್ಯಗಳೂ ಸೇರಿ ವಿಶ್ವಾದ್ಯಂತ 1,000 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.
'ಚಾರ್ಲಿ ಒಂದು ಸಿನಿಮಾ ಮಾತ್ರವಲ್ಲ, ಅದು ನನ್ನ ಜೀವನದ ವಿಶೇಷ ಅನುಭವ. ನಮ್ಮ ಜೊತೆ ಇರುವ ಚಾರ್ಲಿ(ನಾಯಿ) ಸಿನಿಮಾ ಮೂಲಕ ಸಮಾಜದಲ್ಲಿ ಸಾಕಷ್ಟು ಬದಲಾವಣೆ ಮಾಡಲು ಬಂದಿದ್ದಾಳೆ' ಎಂದು ರಕ್ಷಿತ್ ಶೆಟ್ಟಿ ಹೇಳಿದರು.
'ಚಿತ್ರಕ್ಕಾಗಿ ನಾಲ್ಕು ಶ್ವಾನಗಳನ್ನು ದತ್ತು ಪಡೆದು ತರಬೇತಿ ನೀಡೋದಕ್ಕೆ ಶುರು ಮಾಡಿದ್ವಿ. ಆದರೆ ಬಳಸಿದ್ದು ಮಾತ್ರ ಎರಡು ಚಾರ್ಲಿಗಳನ್ನು. ಈ ನಾಲ್ಕು ಚಾರ್ಲಿಗಳಲ್ಲಿ ಒಂದು ನನ್ನ ಮನೆಗೆ, ಇನ್ನೊಂದು ನಿರ್ದೇಶಕ ಕಿರಣ್ ರಾಜ್ ಮನೆಗೆ, ಇನ್ನೆರಡು ಬೇರೆಯವರ ಮನೆಗೆ ಹೋಗುತ್ತದೆ' ಎಂದರು.
ಪಾರ್ಟ್ 2 ಬಗ್ಗೆ ಮಾತನಾಡುತ್ತಾ, 'ನಾನು ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿದ ಬಳಿಕ ನೋಡಬೇಕು. ಈ ಸಿನಿಮಾದ ಎಲ್ಲಾ ನೆನಪುಗಳು ಹೋಗಬೇಕು. ಜೊತೆಗೆ ಈ ಸಿನಿಮಾದಲ್ಲಿ ಸಾಕಷ್ಟು ಚಾಲೆಂಜ್‌ಗಳನ್ನು ಎದುರಿಸಿದ್ದೇನೆ. ಹೇಳೋದಿಕ್ಕೆ ಆಗೋಲ್ಲ, ಐದಾರು ವರ್ಷಗಳ ನಂತರ ಚಾರ್ಲಿ ಪಾರ್ಟ್ 2 ಮಾಡುವ ಯೋಚನೆ ಬಂದರೆ ಮಾಡಬಹುದು' ಎಂದು ತಿಳಿಸಿದರು.
ಜೀವನದ ಬಗ್ಗೆ ಕನಸುಗಳೇ ಇಲ್ಲದ ಮನುಷ್ಯನ ಜೀವನದಲ್ಲಿ ಒಂದು ಶ್ವಾನ ಬಂದ ಮೇಲೆ ಹೇಗೆಲ್ಲ ಬದಲಾವಣೆ ಆಗುತ್ತದೆ ಅನ್ನೋದು ಚಾರ್ಲಿ ಸಿನಿಮಾದ ಕಥೆ. ಈ ಚಿತ್ರದಲ್ಲಿ ಚಾರ್ಲಿ ಬಹಳ ಚೆನ್ನಾಗಿ ಅಭಿನಯ ಮಾಡಿದ್ದಾಳೆ. ಚಾರ್ಲಿಗೆ ಆಗಲಿ ಪ್ರಶಸ್ತಿ ಬಂದ್ರೆ, ಅದು ಅವಳಿಗೇ ಸಲ್ಲಬೇಕು ಅನ್ನೋದು ರಕ್ಷಿತ್ ಶೆಟ್ಟಿ ಮಾತು.
ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿ ಪುತ್ರನಿಗೆ ನಾಮಕರಣ.. ಹೆಸರೇನು ಗೊತ್ತಾ?