ಇಂದು ರಾಷ್ಟ್ರ ರಾಜಧಾನಿಯಲ್ಲಿ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಜೇತರಿಗೆ ಪ್ರತಿಷ್ಟಿತ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಪ್ರತಿಷ್ಟಿತ ಸಮಾರಂಭ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಉಪಸ್ಥಿತರಿರಲಿದ್ದಾರೆ. ಗೌರವಾನ್ವಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಕೆಲವೇ ಕ್ಷಣಗಳು ಬಾಕಿ ಇದ್ದು, ವಿವಿಧ ವಿಭಾಗಗಳಲ್ಲಿ ಹಲವರಿಗೆ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಲಾಗುವುದು.
69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ:
ಸ್ಥಳ: ನವದೆಹಲಿಯ ವಿಜ್ಞಾನ ಭವನ.
ದಿನಾಂಕ: ಅಕ್ಟೋಬರ್ 17, 2023.
ಸಮಯ: ಮಧ್ಯಾಹ್ನ 3.00ಕ್ಕೆ ಆರಂಭ.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು: ಅಲ್ಲು ಅರ್ಜುನ್, ಕೃತಿ ಸನೋನ್, ಆಲಿಯಾ ಭಟ್, ವಹೀದಾ ರೆಹಮಾನ್, ಪಲ್ಲವಿ ಜೋಶಿ, ಪಂಕಜ್ ತ್ರಿಪಾಠಿ ಸೇರಿದಂತೆ ಹಲವರು.
ಹಿರಿಯ ನಟಿ ವಹೀದಾ ರೆಹಮಾನ್ ಅವರಿಗೆ 2021ರ ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಆರ್ ಮಾಧವನ್ ನಿರ್ದೇಶನದ 'ರಾಕೆಟ್ರಿ: ದಿ ನಂಬಿ ಎಫೆಕ್ಟ್' 2021ರ ಅತ್ಯುತ್ತಮ ಚಲನಚಿತ್ರ ಎಂದು ಗೌರವಿಸಲಾಗುವುದು. 'ಪುಷ್ಪಾ: ದಿ ರೈಸ್'ನಲ್ಲಿನ ಅಮೋಘ ಅಭಿನಯಕ್ಕೆ ದಕ್ಷಿಣ ಚಿತ್ರರಂಗದ ಬಹುಬೇಡಿಕೆ ನಟ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಬಾಲಿವುಡ್ ನಟಿ ಆಲಿಯಾ ಭಟ್ ಅವರು ಗಂಗೂಬಾಯಿ ಕಥಿಯಾವಾಡಿ ಚಿತ್ರದಲ್ಲಿನ ಅತ್ಯುತ್ತಮ ನಟನೆಗೆ ಪ್ರಶಸ್ತಿ ಪಡೆಯಲಿದ್ದಾರೆ. ಇತ್ತ ಮಿಮಿ ಚಿತ್ರದಲ್ಲಿನ ಅದ್ಭುತ ಅಭಿನಯಕ್ಕಾಗಿ ಬಾಲಿವುಡ್ ಅಭಿನೇತ್ರಿ ಕೃತಿ ಸನೋನ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲಿದ್ದಾರೆ.
ಪಲ್ಲವಿ ಜೋಶಿ ಹಾಗೂ ಪಂಕಜ್ ತ್ರಿಪಾಠಿ ಅವರು ದಿ ಕಾಶ್ಮೀರ್ ಫೈಲ್ಸ್ ಮತ್ತು ಮಿಮಿಯಲ್ಲಿನ ತಮ್ಮ ಪಾತ್ರಗಳಿಗಾಗಿ ಅತ್ಯುತ್ತಮ ಪೋಷಕ ನಟಿ ಮತ್ತು ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗಳನ್ನು ಪಡೆಯಲಿದ್ದಾರೆ. ಬ್ಲಾಕ್ಬಸ್ಟರ್ ಆರ್ಆರ್ಆರ್ ಸಿನಿಮಾ ಬೆಸ್ಟ್ ಪಾಪುಲರ್ ಸಿನಿಮಾ ಆಗಿ ಹೊರಹೊಮ್ಮಿದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ರಾಷ್ಟ್ರೀಯ ಏಕೀಕರಣದ ಅತ್ಯುತ್ತಮ ಚಲನಚಿತ್ರವಾಗಿ ನರ್ಗಿಸ್ ದತ್ ಪ್ರಶಸ್ತಿಯನ್ನು ಪಡೆಯಲಿದೆ.
ಇದನ್ನೂ ಓದಿ: ಕೇವಲ 48 ಗಂಟೆಗಳಲ್ಲಿ ನಡೆಯುವ ಕಥೆ: 'ಘೋಸ್ಟ್' ಮಾಹಿತಿ ಹಂಚಿಕೊಂಡ ಶಿವರಾಜ್ಕುಮಾರ್