ಧಾರವಾಡ: ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾದ ಹಿನ್ನೆಲೆ ಮೆರವಣಿಗೆಯನ್ನು ಅರ್ಧಕ್ಕೇ ಮೊಟಕುಗೊಳಿಸಿ ತರಾತುರಿಯಲ್ಲಿ ಬಂದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಧಾರವಾಡದ ಹಳೇಯ ಎಪಿಎಂಸಿ ಈಶ್ವರ ದೇವಸ್ಥಾನದಿಂದ ಪ್ರಾರಂಭವಾಗಿದ್ದ ಮೆರವಣಿಗೆ ಶಿವಾಜಿ ವೃತ್ತದ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕೆಲಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿ ಆನಂತರ ಮೆರವಣಿಗೆ ಅರ್ಧಕ್ಕೇ ಮೊಟಕುಗೊಳಿಸಿ ಓಡೋಡಿ ಬಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ನಾಮಪತ್ರ ಸಲ್ಲಿಸಿದರು. ಬಳಿಕ ಮತ್ತೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಮೆರವಣಿಗೆ ಮುಗಿದ ಬಳಿಕ ಮೂರು ಗಂಟೆಗೆ ಜಿಲ್ಲಾ ಚುನಾವಣಾಧಿಕಾರಿಗೆ ಕಚೇರಿಗೆ ಬಂದ ಕಾಂಗ್ರೆಸ್ ಅಭ್ಯರ್ಥಿ ಕುಲಕರ್ಣಿ ಮತ್ತೊಂದು ಬಾರಿ ಉಮೇದುವಾರಿಕೆ ಸಲ್ಲಿಸಿದರು.
ವಿನಯ್ಗೆ ಎಂಎಲ್‌ಸಿ ಶ್ರೀನಿವಾಸ ಮಾನೆ, ವಿನೋದ ಅಸೂಟಿ, ಇಸ್ಮಾಯಿಲ್ ತಮಟಗಾರ, ಮುಖ್ಯಮಂತ್ರಿ ಕಾರ್ಯದರ್ಶಿ ಎನ್.ಹೆಚ್. ಕೊನರೆಡ್ಡಿ ಸೇರಿದಂತೆ ಕುಟುಂಬಸ್ಥರು ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಸಾಥ್ ನೀಡಿದರು.