ಬಳ್ಳಾರಿ: ಇತರ ಚಟುವಟಿಕೆಗಳಿಗಿಂತ ಗಣಿಧೂಳಿನಿಂದಲೇ ಹೆಚ್ಚು ಖ್ಯಾತಿ ಪಡೆದಿರುವ ಬಳ್ಳಾರಿಯ ಲೋಕಸಭಾ ಚುನಾವಣೆ ರಂಗೇರಿದ್ದು ಇಂದು ಮತದಾನ ನಡೆಯುತ್ತಿದೆ., ಕೇತ್ರವು 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಅವುಗಳೆಂದರೆ ಬಳ್ಳಾರಿ, ಬಳ್ಳಾರಿ ಗ್ರಾಮಾಂತರ, ಹೊಸಪೇಟೆ(ವಿಜಯನಗರ ಕ್ಷೇತ್ರ), ಹಡಗಲಿ, ಹಗರಿ ಬೊಮ್ಮನಹಳ್ಳಿ, ಕೂಡ್ಲಿಗಿ, ಸಂಡೂರು ಹಾಗೂ ಕಂಪ್ಲಿ. ಇವುಗಳಲ್ಲಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೆ, ಉಳಿದ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದು, ಕಾಂಗ್ರೆಸ್ನ ಭದ್ರಕೋಟೆಯೆನಿಸಿದೆ. ಜೊತೆಗೆ ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಭರ್ಜರಿಯಾಗಿ ಜಯಭೇರಿ ಬಾರಿಸಿದ್ದು, ಈ ಬಾರಿ ಕುತೂಹಲಕ್ಕೆ ಕಾರಣವಾಗಿದೆ.
ಕ್ಷೇತ್ರದಲ್ಲಿರುವ ಘಟಾನುಘಟಿಗಳು:
ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪ. ಮೂಲತಃ ರೈತ ಕುಟುಂಬದಿಂದ ಬಂದ ದೇವೇಂದ್ರಪ್ಪನವರು ಮೂಲ ಕಾಂಗ್ರೆಸ್ಸಿಗರು. ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ನಿವಾಸಿ. ಜಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ದೇವೇಂದ್ರಪ್ಪ ಸ್ಪರ್ಧೆ ಮಾಡಿದ್ದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಸಂಬಂಧಿಕರೂ ಹೌದು. ಮೊನ್ನೆ ತಾನೆ ಹರಪನಹಳ್ಳಿ ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ಮಾಡಲಾಗಿದ್ದು, ಈ ಜಿಲ್ಲೆಗೆ ಅವರು ಚಿರಪರಿಚಿತರು ಎಂದೇ ಹೇಳಲಾಗುತ್ತಿದೆ. ಈ ಹಿಂದೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪ ಅವರಿಗೆ ನೇರ ಸ್ಪರ್ಧೆಯೊಡ್ಡುತ್ತಿರುವವರು ಹಾಲಿ ಲೋಕಸಭಾ ಸದಸ್ಯರೂ ಆಗಿರುವ ಕಾಂಗ್ರೆಸ್ನ ಉಗ್ರಪ್ಪ. ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಸರಿ ಸುಮಾರು 2.43 ಲಕ್ಷ ಮತಗಳ ಅಂತರಿಂದ ಗೆಲುವು ಸಾಧಿಸಿದ್ದರು. ಕೇವಲ ಐದು ತಿಂಗಳಕಾಲ ಸಂಸದರಾಗಿ ಕರ್ತವ್ಯ ನಿರ್ವಹಿಸಿದ ಅನುಭವವಿದ್ದು, ಮೂಲತಃ ಬೆಂಗಳೂರು ದಕ್ಷಿಣ ಭಾಗದವರು. ವೃತ್ತಿಯಲ್ಲಿ ವಕೀಲರಾಗಿದ್ದವರು. ಬಿಎಸ್ಸಿ ಹಾಗೂ ಎಲ್ಎಲ್ಬಿ ಪದವೀಧರರಾಗಿದ್ದಾರೆ. ಜೊತೆಗೆ ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿದ್ದ ಅನುಭವವನ್ನು ಹೊಂದಿದ್ದಾರೆ. ಇನ್ನುಳಿದಂತೆ ಎಸ್ಯುಸಿಐಸಿ ಪಕ್ಷದ ಎ. ದೇವದಾಸ, ಬಿಎಸ್ಪಿ. ಅಭ್ಯರ್ಥಿ ಕೆ. ಗೂಳಪ್ಪ ಸೇರಿದಂತೆ ಇತರೆ ಹನ್ನೊಂದು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕ್ಷೇತ್ರದ ಚಿತ್ರಣ:
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಅಂದಾಜು 17,51,911 ಮತದಾರರಿದ್ದಾರೆ. ಆ ಪೈಕಿ 8,71,191 (ಪುರುಷರು), 8,80,488 (ಮಹಿಳೆಯರು) ಹಾಗೂ 232 (ಇತರರು) ಇದ್ದಾರೆ. ಜಿಲ್ಲೆಯ ಹರಪನಹಳ್ಳಿ ಹಾಗೂ ಸಿರುಗುಪ್ಪ ತಾಲೂಕುಗಳು ದಾವಣಗೆರೆ ಮತ್ತು ಕೊಪ್ಪಳ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಒಳಪಡುವುದರಿಂದ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಅಂದಾಜು 541 ಸೂಕ್ಷ್ಮ, 1688 ಸಾಧಾರಣ ಸೇರಿದಂತೆ ಒಟ್ಟು 2408 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 236 ವಲ್ನರಬಲ್ ಮತಗಟ್ಟೆಗಳು, 140 ವೆಬ್ ಕ್ಯಾಸ್ಟಿಂಗ್ ಮತಗಟ್ಟೆಗಳು, 121 ಶಾಡೋ ಝೋನ್, 19 ಸಖಿ ಮತ್ತು ಕೇವಲ ಒಂದೇ ಒಂದು ಮಾತ್ರ ಪಿಡಬ್ಲ್ಯುಡಿ ಮತಗಟ್ಟೆಗಳನ್ನ ಸ್ಥಾಪಿಸಲಾಗಿದೆ. ಅಲ್ಲದೆ, 2687 ಪಿಆರ್ಒ, 2667 ಎಪಿಆರ್ಒ, ಪ್ರತಿಯೊಂದು ಮತಗಟ್ಟೆಗೆ ಇಬ್ಬರಂತೆ ಮೈಕ್ರೋ ಅಬ್ಸವರ್ಗಳು, ಸಖಿ ಮತಗಟ್ಟೆಗಳಿಗೆ 76 ಮಂದಿ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ.
ತಲಾ 2313 ಸಿಯು, 2313 ಬಿಯು ಹಾಗೂ 2509 ವಿವಿ ಪ್ಯಾಟ್ ಯಂತ್ರೋಪಕರಣಗಳನ್ನ ಬಳಕೆ ಮಾಡಲಾಗುತ್ತದೆ.
ಸಕಲ ಸಿದ್ಧತೆ:
ಶಾಂತಿಯುತ ಮತದಾನ ನಡೆಸುವ ಸಲುವಾಗಿಯೇ ಅಂದಾಜು 2160 ಪೊಲೀಸರು ಹಾಗೂ 1200ಕ್ಕೂ ಅಧಿಕ ಗೃಹರಕ್ಷಕ ದಳ ಸಿಬ್ಬಂದಿ ಮತ್ತು ಸಿಎಸ್ಆರ್ಪಿ ತುಕಡಿಗಳನ್ನ ನಿಯೋಜಿಸಲಾಗಿದೆ. ಸರಿ ಸುಮಾರು 425 ಕೆಎಸ್ಆರ್ಟಿಸಿ ಬಸ್ಗಳು, 109 ಮಿನಿ ಬಸ್ಗಳು, 83 ಕ್ಯಾಬ್, ಟಾಟಾ ಸುಮೋ ಹಾಗೂ ಜೀಪ್ ಗಳನ್ನ ಚುನಾವಣೆಗಾಗಿ ಬಳಸಿಕೊಳ್ಳಲಾಗುತ್ತಿದೆ.