ಬೆಂಗಳೂರು: ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪರ ಬ್ಯಾಟಿಂಗ್ ಮಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್, ಖರ್ಗೆ ಅವರ ಜೊತೆ ಯಾರನ್ನೂ ಹೋಲಿಕೆ ಮಾಡಬಾರದು. ಖರ್ಗೆಯವರದು ಸಿಎಂ ಸ್ಥಾನಕ್ಕೂ ಮೀರಿದ ವ್ಯಕ್ತಿತ್ವ ಎಂದು ಹೇಳಿದ್ದಾರೆ.
ಶಕ್ತಿ ಭವನದಲ್ಲಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಹುದ್ದೆಗೆ ಸಚಿವ ಹೆಚ್.ಡಿ.ರೇವಣ್ಣ ಹೆಸರು ತೇಲಿಬಿಟ್ಟ ಸಿದ್ದರಾಮಯ್ಯನವರ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಮಲ್ಲಿಕಾರ್ಜುನ ಖರ್ಗೆಯವರ ಜೊತೆ ಯಾರನ್ನೂ ಹೋಲಿಸಬೇಡಿ. ಖರ್ಗೆ ಕೊಡುಗೆ ಈ ರಾಜ್ಯಕ್ಕೆ ಅಪಾರ. ಉತ್ತರ ಕರ್ನಾಟಕ ಭಾಗಕ್ಕೆ ತಮ್ಮದೇ ಆದ ವಿಶೇಷ ಕೊಡುಗೆ ಕೊಟ್ಟಿದ್ದಾರೆ ಎಂದರು.
ಖರ್ಗೆ, ಧರ್ಮಸಿಂಗ್ ಇಬ್ಬರೂ ಉನ್ನತ ನಾಯಕರು. ಖರ್ಗೆಯವರ ಹೆಸರಿಗೆ ಬೇರೆ ಯಾರದ್ದೇ ಹೆಸರನ್ನು ಥಳುಕು ಹಾಕಬೇಡಿ. ಸಿದ್ದರಾಮಯ್ಯ ಟ್ವೀಟ್ ಬಗ್ಗೆ ನನ್ನನ್ನು ಯಾಕೆ ಕೇಳ್ತೀರಿ?, ಖರ್ಗೆ ಸಿಎಂ ಹುದ್ದೆಯಿಂದ ಯಾಕೆ ವಂಚಿತರಾದರೆಂದು ಸಿದ್ದರಾಮಯ್ಯರನ್ನೇ ಕೇಳಿ ಎಂದರು.
ಶಾಸಕಾಂಗ ಸಭೆ
ಬೆಂಗಳೂರಿನಲ್ಲಿ ಮೇ 24 ರಂದು ಜೆಡಿಎಸ್ ಶಾಸಕಾಂಗ ಸಭೆ ಕರೆಯಲಾಗಿದ್ದು, ಮೇ 23ರ ಲೋಕಸಭೆ ಫಲಿತಾಂಶದ ಪರಿಣಾಮಗಳ ಕುರಿತು ಚರ್ಚೆ ನಡೆಸುತ್ತೇವೆ ಎಂದು ಹೇಳಿದರು. ಇನ್ನು ಲೋಕಸಭೆ ಫಲಿತಾಂಶದಿಂದ ಜೆಡಿಎಸ್ಗೆ ಯಾವುದೇ ಆತಂಕವಿಲ್ಲ ಎಂದ ವಿಶ್ವನಾಥ್, ಮೇ 21ರಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಈ ಸಭೆಯಲ್ಲಿ ಸಚಿವರು, ಶಾಸಕರು, ಸಂಸದರು ಸೇರಿದಂತೆ ಎಲ್ಲ ಜೆಡಿಎಸ್ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.