ಬಾಗಲಕೋಟೆ : ಬಿಜೆಪಿ ಪಕ್ಷ ತನ್ನ ಅಸ್ತಿತ್ವವನ್ನ ಕಳೆದುಕೊಂಡು ಮೋದಿ, ಅಮಿತ್ ಶಾ ಪಕ್ಷವಾಗಿ ಉಳಿದಿದೆ ಎಂದು ಸಚಿವ ಶಿವಾನಂದ ಪಾಟೀಲ್ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರಕ್ಕೆ ಪ್ರಧಾನಿ ಭೇಟಿ ಹಿನ್ನೆಲೆ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿವಾನಂದ, ಬಿಜೆಪಿ ಪಕ್ಷದ ಅಸ್ತಿತ್ವ ಉಳಿಯಬೇಕಾದರೆ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ ಅಡ್ವಾನಿಯವರೇ ಮೂಲ ಕಾರಣರಾಗಿದ್ದರು, ಆದ್ರೆ ವಾಜಪೇಯಿ ಇಲ್ಲ, ಇನ್ನೊಬ್ಬರು ಇದ್ದು ಇಲ್ಲದಂತಾಗಿದ್ದಾರೆ ಎಂದು ವ್ಯಂಗ್ಯವಾಡಿದ್ರು
ಪ್ರಧಾನಿ ಮೋದಿ ಸರ್ವಾಧಿಕಾರ ಧೋರಣೆ ತಾಳುತ್ತಿದ್ದು, ನಿನ್ನೆ ನಡೆದ ಭಾಷಣದಲ್ಲಿ ಕೇವಲ ತಮಗೆ ವೋಟ್ ಮಾಡುವಂತೆ ತಿಳಿಸಿದ್ದಾರೆ ಹೊರತು ತಮ್ಮ ಪಕ್ಷದ ಅಭ್ಯರ್ಥಿ ಹೆಸರು ಎಲ್ಲಿಯೂ ಹೇಳಿಲ್ಲ, ಇದು ಅಮೆರಿಕದಂತೆ ಅಧ್ಯಕ್ಷ ಆಯ್ಕೆ ಅಲ್ಲ, ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಎಂದು ಶಿವಾನಂದ ಟಾಂಗ್ ನೀಡಿದರು.
ಆಲಮಟ್ಟಿ ಆಣೆಕಟ್ಟು ಜಲಾಶಯದ ನೀರಾವರಿಯು ರಾಷ್ಟ್ರೀಯ ಯೋಜನೆ ಆಗಬೇಕಿತ್ತು, ಇಂತಹ ಯೋಜನೆಯನ್ನ ರಾಷ್ಟ್ರೀಕರಣ ಮಾಡದೆ ಪ್ರಧಾನಿ ತಮ್ಮ ಪಕ್ಷದ ಪ್ರಚಾರಕ್ಕೆ ಮಾತ್ರ ಬಳಸುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಆಡಳಿತ ಸಮಯದಲ್ಲಿ ಆಲಮಟ್ಟಿ ಜಲಾಶಯ ನೀರಾವರಿ ಯೋಜನೆಗೆ ಹೆಚ್ಚು ಮಹತ್ವ ಬಂದಿತ್ತು ಎಂದು ದೇವೇಗೌಡರನ್ನ ಹೊಗಳಿದರು.
ಮೋದಿಯವರು ಮಜಬೂತ್ ಸರ್ಕಾರ ರಚನೆ ಆಗಬೇಕು ಅಂತಾರೆ, ಆದ್ರೆ ಮಜಬೂತ್ ಗಿಂದ ಮಜಬೂರಿ ಸರ್ಕಾರ ಇದ್ದಾಗ ಮಾತ್ರ ಕರ್ನಾಟಕ ಹಾಗೂ ದೇಶಕ್ಕೆ ಹೆಚ್ಚು ಲಾಭವಾಗಿದೆ, ಮಜಬೂತ್ ಸರ್ಕಾರದಿಂದಲ್ಲ ಎಂದರು, ಹಿಂದಿನ ಸರ್ಕಾರ ರೈತರಿಗಾಗಿ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ, ಆದ್ರೆ ಮಜಬೂತ್ ಸರ್ಕಾರಕ್ಕೆ 7 ಲಕ್ಷ ನೀಡಲು ಸಾಧ್ಯವಾಗಿಲ್ಲ. ಇತ್ತ ಸಂಸದರು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಮತ ನೀಡಿ ಬೆಂಬಲಿಸುವಂತೆ ಮನವಿ ಮಾಡಿಕೊಂಡರು.