ಕಾರವಾರ: ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಆರನೇ ಬಾರಿ ವಿಜಯಮಾಲೆ ಧರಿಸಿರುವ ಅನಂತಕುಮಾರ್ ಹೆಗ್ಡೆ ರಾಜ್ಯದಲ್ಲೆ ಅತಿ ಹೆಚ್ಚು ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 11,54,390 ಮತಗಳ ಪೈಕಿ ಅನಂತಕುಮಾರ್ ಹೆಗಡೆ 7,86,042 ಮತಗಳನ್ನು ಪಡೆದಿದ್ದಾರೆ.
ಇನ್ನು ಎರಡನೇ ಸ್ಫರ್ಧಿಯಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಇದ್ದು, ಕೇವಲ 3,06,393 ಮತಗಳನ್ನಷ್ಟೇ ಪಡೆಯಲು ಶಕ್ತರಾಗಿದ್ದಾರೆ. ಇದರೊಂದಿಗೆ ಅನಂತಕುಮಾರ್ ಹೆಗ್ಡೆ 4,79,649 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದು, ಇದು ದೇಶದಲ್ಲೆ 3ನೇ ಅತಿ ದೊಡ್ಡ ಅಂತರದ ಗೆಲುವು ಎನ್ನಲಾಗುತ್ತಿದೆ.
ಇನ್ನು ಉತ್ತರಕನ್ನಡದಿಂದ ಏಳು ಬಾರಿ ಸ್ಪರ್ಧಿಸಿದ್ದ ಅನಂತಕುಮಾರ್ ಹೆಗ್ಡೆ ಹಿಂದಿನ ಚುನಾವಣೆಗಿಂತಲೂ ಅತಿ ಹೆಚ್ಚಿನ ಅಂತರದ ಗೆಲುವು ಸಾಧಿಸಿದ್ದು ದಾಖಲೆ ಬರೆದಿದ್ದಾರೆ.
ಈ ಹಿಂದೆ ಮೊದಲನೇ ಬಾರಿ 1996 ರಲ್ಲಿ ಸ್ಪರ್ಧಿಸಿದ್ದಾಗ ಜನತಾದಳದ ಪ್ರಮೋದ್ ಹೆಗ್ಡೆ ವಿರುದ್ಧ 55,896 ಮತಗಳ ಅಂತರದಿಂದ, 1998, 2004 ಮತ್ತು2009 ರಲ್ಲಿ ಕಾಂಗ್ರೆಸ್ನ ಮಾರ್ಗರೇಟ್ ಆಳ್ವ ವಿರುದ್ಧ 87,047, 1,72,226 ಹಾಗೂ 22769 ಮತಗಳ ಅಂತರ ಮತ್ತು 2014 ರಲ್ಲಿ ಕಾಂಗ್ರೆಸ್ನ ಪ್ರಶಾಂತ್ ದೇಶಪಾಂಡೆ ವಿರುದ್ಧ 1,40,360 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ ಅನಂತಕುಮಾರ್ ಈ ಬಾರಿ ಪಡೆದ ಮತಗಳು ರಾಜ್ಯದಲ್ಲಿಯೇ ಅತಿ ಹೆಚ್ಚಿನ ಮತಗಳ ಅಂತರದಲ್ಲಿ ಹಾಗೂ ಕ್ಷೇತ್ರದಲ್ಲಿ ದಾಖಲೆಯ ಗೆಲುವು ದಾಖಲಿಸಿದೆ. ಇದಕ್ಕೆ ಪ್ರಮುಖವಾಗಿ ಮೋದಿ ಅಲೆ, ಅನಂತಕುಮಾರ್ ಹೆಗಡೆ ವರ್ಚಸ್ಸು, ಜಿಲ್ಲೆಯಲ್ಲಿನ ಹಿಂದುತ್ವದ ಅಲೆ, ಬಿಜೆಪಿ ಸಂಘಟನಾ ಶಕ್ತಿ ಪ್ರಮುಖ ಕಾರಣ ಎನ್ನುವ ಮಾತುಗಳು ಸದ್ಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.