ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಪರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಯಲಹಂಕದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಮತಯಾಚನೆ ನಡೆಸಿದರು.
ಯಲಹಂಕ ನಗರದ ಚೌಡೇಶ್ವರಿ ವಾರ್ಡ್ ಮತ್ತು ಕೆಂಪೇಗೌಡ ವಾರ್ಡ್ ವ್ಯಾಪ್ತಿಯ ಹಳೆನಗರದ ಬೀದಿ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಸಂಚರಿಸಿ ಅಮಿತ್ ಶಾ ಪ್ರಚಾರ ನಡೆಸಿದರು. ಇದೇ ವೇಳೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಎನ್. ಬಚ್ಚೇಗೌಡ, ಶಾಸಕ ಎಸ್. ಆರ್. ವಿಶ್ವನಾಥ್ ಸಾಥ್ ನೀಡಿದರು.
ಸಾವಿರಾರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೊಡಗೂಡಿ, ಚೌಡೇಶ್ವರಿ ವಾರ್ಡ್ ವ್ಯಾಪ್ತಿಯ ಕಾಮಾಕ್ಷಮ್ಮ ಬಡಾವಣೆಯಿಂದ ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ಅಮಿತ್ ಶಾ ಪ್ರಚಾರ ಆರಂಭಿಸಿದರು. ಯಲಹಂಕ ನಗರದ ವಾರ್ಡ್ ನಂ.1 ಮತ್ತು ವಾರ್ಡ್ ನಂ. 2ರ ವ್ಯಾಪ್ತಿಯ ವಿವಿಧ ಬಡಾವಣೆಗಳ ಮೂಲಕ, ಯಲಹಂಕ ಸಂತೆ ಸರ್ಕಲ್‍ನಲ್ಲಿರುವ ಕೆಂಪೇಗೌಡ ಪ್ರತಿಮೆಯ ಬಳಿ ತರಾತುರಿಯಲ್ಲಿ ಚುನಾವಣಾ ಪ್ರಚಾರವನ್ನು ಅಂತ್ಯಗೊಳಿಸಿದರು.
ಮತ್ತೊಮ್ಮೆ ಮೋದಿ ಎಂಬ ಘೋಷಣೆ ಕೂಗುವ ಮೂಲಕ ಬೀದಿ-ಬೀದಿಯಲ್ಲಿ ಜಾಥಾ ನಡೆಸಿದ ಸಾವಿರಾರು ಕಾರ್ಯಕರ್ತರು, ಬೈಕ್ ಹಾಗೂ ಕಾಲ್ನಡಿಗೆ ಮೂಲಕ ವಿವಿಧ ಬೀದಿಗಳಲ್ಲಿ ಸಂಚರಿಸಿ ಬಚ್ಚೇಗೌಡ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.
ಟ್ರಾಫಿಕ್ ಜಾಮ್..
ಯಲಹಂಕ ಹಳೆನಗರಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಮಿಸುತ್ತಿದ್ದಂತೆ ಯಲಹಂಕ, ಯಲಹಂಕ ಉಪನಗರ, ಏರ್ಪೋರ್ಟ್ ರೋಡ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಹೀಗಾಗಿ ವಾಹನ ಸವಾರರು ರಸ್ತೆಯಲ್ಲಿಯೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. 30 ನಿಮಿಷಕ್ಕೂ ಹೆಚ್ಚು ಕಾಲ ವಾಹನ ಸವಾರರು ರಸ್ತೆಗಳಲ್ಲಿ ಆಮೆಗತಿಯಲ್ಲಿ ಸಂಚರಿಸಿದರು.