ನವದೆಹಲಿ: 13 ರಾಜ್ಯಗಳಲ್ಲಿ 116 ಸ್ಥಾನಗಳಿಗೆ ಇವತ್ತು ನಡೆದ ಅತೀ ದೊಡ್ಡ ಮತದಾನದ ಹಂತದಲ್ಲಿ ಹೆಚ್ಚು ಶೇಕಡಾವಾರು ಮತದಾನ ಪ್ರಮಾಣ ದಾಖಲಾಗಿದೆ. ಮೂರನೇ ಹಂತದಲ್ಲಿ ಶೇ 64 ರಷ್ಟು ಮತದಾನವಾಗಿದ್ದು ಸಂಜೆ 7.30 ಗಂಟೆಯವರೆಗಿನ ಮಾಹಿತಿ ಪ್ರಕಾರ, ಅಸ್ಸಾಂನಲ್ಲಿ ಅತೀ ಹೆಚ್ಚು ಶೇ 80.70 ಮತದಾನವಾಗಿದೆ. ಇನ್ನು ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಶೇ 66.34 ಎಂದು ಅಂದಾಜು ಮಾಡಲಾಗಿದೆ.
ಈ ಮೂಲಕ ಲೋಕಸಭೆಯ ಒಟ್ಟು 543 ಸ್ಥಾನಗಳ ಪೈಕಿ 302 ಸ್ಥಾನಗಳಿಗೆ ಮತದಾನ ಪ್ರಕ್ರಿಯೆ ಮುಗಿದಿದೆ. ಮುಂದಿನ ನಾಲ್ಕು ಹಂತಗಳಲ್ಲಿ ಶೇ 50 ರಷ್ಟು ಸ್ಥಾನಗಳಿಗೆ ಮತದಾನ ನಡೆಯಲಿದೆ.
ರಾಜ್ಯಗಳಲ್ಲಿ ಶೇ.ಮತದಾನ ವಿವರ: (ಸಂಜೆ 7.30 ಗಂಟೆಯವರೆಗಿನ ಮಾಹಿತಿ)
ಇನ್ನುಳಿದಂತೆ, ಜಮ್ಮು ಕಾಶ್ಮೀರ- ಶೇ 12.86, ಗುಜರಾತ್‌ನಲ್ಲಿ ಶೇ 62.35, ಉತ್ತರ ಪ್ರದೇಶದಲ್ಲಿ ಶೇ60.16, ಮಹರಾಷ್ಟ್ರದಲ್ಲಿ ಶೇ 57.51, ಗೋವಾದಲ್ಲಿ ಶೇ 75.45, ಕೇರಳ ಶೇ 70.43, ಛತ್ತೀಸ್‌ಗಢ ಶೇ 68.25, ಒಡಿಶಾ ಶೇ.58.18, ಅಸ್ಸಾಂ ಶೇ 80.70, ಬಿಹಾರ ಶೇ 59.67 ಹಾಗು ತ್ರಿಪುರಾ ಶೇ 78.67, ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಗರ ಹವೇಲಿ (ಶೇ 71.43) , ದಮನ್ ಮತ್ತು ಡಿಯು (ಶೇ 65.34) ನಲ್ಲೂ ತಲಾ ಒಂದೊಂದು ಕ್ಷೇತ್ರಗಳಿಗೆ ಮತದಾನ ನಡೆದಿದೆ.
ಮತದಾನದ ವೇಳೆ ಹಿಂಸಾಚಾರ:
ಪಶ್ಚಿಮ ಬಂಗಾಲದ ಬಾಲೂರ್‌ಘಾಟ್‌ನಲ್ಲಿರುವ ಮತಗಟ್ಟೆಯ ಸಮೀಪ ಕಿಡಿಗೇಡಿಗಳು ಬಾಂಬ್ ಎಸೆದು ಪರಾರಿಯಾದ ಘಟನೆ ನಡೆದಿದೆ. ಈ ಸಂದರ್ಭ ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಮುರ್ಷಿದಾಬಾದ್ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗು ಟಿಎಂಸಿ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಮತಯಂತ್ರ ಲೋಪದೋಷ:
ಕೆಲವು ರಾಜ್ಯಗಳಲ್ಲಿ ಇವಿಎಂ ದೋಷ ಕಾಣಿಸಿಕೊಂಡ ಪರಿಣಾಮ, ವೋಟಿಂಗ್ ತಡವಾದ ಪ್ರಸಂಗವೂ ನಡೆಯಿತು. ಈ ವಿಚಾರವಾಗಿ ತ್ರಿಪುರಾದಲ್ಲಿ ನಡೆದ ಗಲಾಟೆ ಸಂಬಂಧ ಆಡಳಿತಾರೂಢ ಬಿಜೆಪಿಯ ಇಬ್ಬರು ಪೊಲಿಂಗ್ ಏಜೆಂಟರುಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮುಂದಿನ ಹಂತಗಳಲ್ಲಿ ಮತದಾನ :
ಒಟ್ಟು 543 ಸ್ಥಾನಗಳಿಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು ಏಪ್ರಿಲ್ 29, ಮೇ6, ಮೇ 12, ಹಾಗು ಮೇ 19 ರಂದು ಮುಂದಿನ ಹಂತ ನಡೆಯಲಿವೆ.