ನವದೆಹಲಿ: ಲೋಕತಂತ್ರ ವ್ಯವಸ್ಥೆಯ ಮಹಾಹಬ್ಬ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಗುರುವಾರದಂದು ದೇಶದ 20 ರಾಜ್ಯಗಳಲ್ಲಿ ಮತದಾನ ನಡೆಯಲಿದೆ.
ಭಾರತದ 20 ರಾಜ್ಯಗಳ 91 ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 11ರಂದು ಮತದಾನ ನಡೆಯಲಿದ್ದು 1279 ಅಭ್ಯರ್ಥಿಗಳ ಹಣೆಬರಹವನ್ನು ಮತದಾರ ಪ್ರಭು ನಿರ್ಧರಿಸಲಿದ್ದಾನೆ.
1279 ಅಭ್ಯರ್ಥಿಗಳ ಪೈಕಿ 1266 ಅಭ್ಯರ್ಥಿಗಳ ಅಫಿಡವಿಟ್ಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ನ್ಯಾಷನಲ್ ಎಲೆಕ್ಷನ್ ವಾಚ್ ಹಾಗೂ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ ಸಂಸ್ಥೆಗಳು ವರದಿಯೊಂದನ್ನು ನೀಡಿವೆ.
ಎರಡೂ ಸಂಸ್ಥೆಗಳು ಜಂಟಿಯಾಗಿ ನಡೆಸಿರುವ ನಡೆಸಿರುವ ಅಧ್ಯಯನದ ಪ್ರಕಾರ 1266ರಲ್ಲಿ 213 ಅಭ್ಯರ್ಥಿಗಳು(ಶೇ. 17) ಅಪರಾಧ ಪ್ರಕರಣಗಳ ಹಿನ್ನೆಲೆ ಹೊಂದಿದ್ದಾರೆ. ಇದರಲ್ಲಿ 146 ಅಭ್ಯರ್ಥಿಗಳು ಗಂಭೀರ ಪ್ರಮಾಣದ ಅಪರಾಧ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ.
146 ಗಂಭೀರ ಅಪರಾಧ ಪ್ರಕರಣ ಹೊಂದಿದ ಅಭ್ಯರ್ಥಿಗಳಲ್ಲಿ 10 ಅಭ್ಯರ್ಥಿಗಳು ಕೊಲೆ ಕೇಸ್, 25 ಅಭ್ಯರ್ಥಿಗಳು ಕೊಲೆ ಪ್ರಯತ್ನದ ಪ್ರಕರಣ ಹೊಂದಿದ್ದಾರೆ.
ಪಕ್ಷ ವಿಭಾಗೀಕರಣ ಹೀಗಿದೆ:
ಕಾಂಗ್ರೆಸ್ ಪಕ್ಷದ 83 ಅಭ್ಯರ್ಥಿಗಳಲ್ಲಿ 35 ಮಂದಿ(ಶೇ. 42) ಅಪರಾಧ ಪ್ರಕರಣ ಹೊಂದಿದ್ದರೆ, ಬಿಜೆಪಿಯ 83 ಅಭ್ಯರ್ಥಿಗಳಲ್ಲಿ 30 ಮಂದಿ(ಶೇ.36) ಅಪರಾಧದಲ್ಲಿ ಶಾಮೀಲಾಗಿದ್ದಾರೆ.
ಗಂಭೀರ ಅಪರಾಧ ಪ್ರಕರಣಗಳಲ್ಲಿ ಕಾಂಗ್ರೆಸ್ನ 22(ಶೇ.27), ಬಿಜೆಪಿಯ 16(ಶೇ.19) ಅಭ್ಯರ್ಥಿಗಳು ಇದ್ದಾರೆ. ಇವುಗಳ ಹೊರತಾಗಿ ಬಿಎಸ್ಪಿ, ವೈಎಸ್ಆರ್ ಕಾಂಗ್ರೆಸ್, ಟಿಡಿಪಿ ಹಾಗೂ ಟಿಆರ್ಎಸ್ ಪಕ್ಷದ ಅಭ್ಯರ್ಥಿಗಳು ಗಂಭೀರ ಅಪರಾಧ ಪ್ರಕರಣ ಹೊಂದಿದವರು ಇದ್ದಾರೆ.
1279 ಅಭ್ಯರ್ಥಿಗಳಲ್ಲಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಕೇವಲ 89. ಅಂದರೆ ಶೇ.7 ಮಾತ್ರ..!
ಕರೋಡ್ಪತಿ ಅಭ್ಯರ್ಥಿಗಳು:
ಮೊದಲ ಹಂತದ ಚುನಾವಣೆಯಲ್ಲಿ ಕಣಕ್ಕಿಳಿದ ಒಟ್ಟಾರೆ ಅಭ್ಯರ್ಥಿಗಳಲ್ಲಿ 401 ಮಂದಿ ಒಂದು ಕೋಟಿ ಹಾಗೂ ಅದಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ. ವರದಿಯ ಪ್ರಕಾರ ಮೊದಲ ಹಂತದ ಚುನಾವಣೆಯ ಅಭ್ಯರ್ಥಿಗಳ ಸರಾಸರಿ ಆಸ್ತಿ 6.63 ಕೋಟಿ.
ಕಾಂಗ್ರೆಸ್ ಪಕ್ಷದಿಂದ 69 ಮಂದಿ ಕರೋಡ್ಪತಿಗಳು ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ 65, ಬಿಎಸ್ಪಿಯಿಂದ 32, ಟಿಡಿಪಿಯಿಂದ 25, ವೈಎಸ್ಆರ್ ಕಾಂಗ್ರೆಸ್ನಿಂದ 2 ಹಾಗೂ ಟಿಆರ್ಎಸ್ನಿಂದ 17 ಮಂದಿ ಕೋಟ್ಯಾಧಿಪತಿಗಳು ಮೊದಲ ಹಂತದ ಚುನಾವಣಾ ಅಖಾಡಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.