ಬಿಲಾಸ್‌ಪುರ (ಛತ್ತೀಸ್‌ಗಢ): ಬಿಲಾಸ್‌ಪುರದ ಕಸ್ತೂರ್ಬಾ ನಗರ ಪ್ರದೇಶದಲ್ಲಿ ಕಾರಿನಲ್ಲಿ ಯುವತಿಯ ಕೊಳೆತ ಸ್ಥಿತಿಯಲ್ಲಿರುವ ಶವ ಪತ್ತೆಯಾಗಿದೆ. ಕೊಲೆ ನಡೆದ ನಾಲ್ಕು ದಿನಗಳ ನಂತರ ಸ್ಯಾಂಟ್ರೋ ಕಾರಿನ ಹಿಂದಿನ ಸೀಟಿನಲ್ಲಿ ಸೀಟ್ ಕವರ್‌ನಲ್ಲಿ ಸುತ್ತಿ ಅರೆ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಪಾರ್ಕಿಂಗ್‌ನಲ್ಲಿದ್ದ ಕಾರಿನಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಮೃತಳನ್ನು ಭಿಲಾಯಿ ಮೂಲದ ಪ್ರಿಯಾಂಕಾ ಸಿಂಗ್ (24) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಕಸ್ತೂರ್ಬಾ ನಗರದ ನಿವಾಸಿ ಆಶಿಶ್ ಸಾಹು ಎಂಬಾತನನ್ನು ಬಂಧಿಸಿದ್ದಾರೆ. ಆಶಿಶ್ ಯುವತಿಯನ್ನು ಕೊಲೆ ಮಾಡಿ ಶವವನ್ನು ತನ್ನ ಸ್ವಂತ ಕಾರಿನಲ್ಲಿಟ್ಟು, ತನ್ನ ನಿವಾಸದ ಅಂಗಳದಲ್ಲಿ ನಿಲ್ಲಿಸಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ. ಇಬ್ಬರೂ ಸಹೋದ್ಯೋಗಿಗಳಾಗಿದ್ದು ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದರು. ಆಶಿಶ್ ವೈದ್ಯಕೀಯ ನಿರ್ದೇಶಕನಾಗಿಯೂ ಮತ್ತೊಂದು ಕಡೆ ಕೆಲಸ ಮಾಡುತ್ತಾನೆ.
ಸಂತ್ರಸ್ತೆ ತಾನು ವಾಸಿಸುತ್ತಿದ್ದ ದಯಾಳ್ ಬಂದ್ ಶಾಂತಿ ಹಾಸ್ಟೆಲ್‌ನಿಂದ ಕಾಣೆಯಾಗಿದ್ದಳು. ನಂತರ ಆಕೆಯ ಸಹೋದರ ನವೆಂಬರ್ 15 ರಂದು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಿಸಿದ್ದರು. ಪ್ರಿಯಾಂಕಾ ಅವರ ಕರೆ ದಾಖಲೆಗಳನ್ನು ಪರಿಶೀಲಿಸಿದಾಗ ಆರೋಪಿಯ ಸುಳಿವು ಸಿಕ್ಕಿತ್ತು. ಆರೋಪಿಯ ಮನೆಯ ಆವರಣದಿಂದ ಶವ ಪತ್ತೆ ಮಾಡಿದ ಪೊಲೀಸರು ತಕ್ಷಣ ಆತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆಶಿಶ್ ಪ್ರಿಯಾಂಕಾಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದು, ಮೇಲ್ನೋಟಕ್ಕೆ ಇದು ಕೊಲೆ ಎಂದು ತೋರುತ್ತಿದೆ ಎಂದು ವಿಧಿವಿಜ್ಞಾನ ತಜ್ಞ ಪ್ರವೀಣ್ ಸೋನಿ ಹೇಳಿದ್ದಾರೆ. ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಕತ್ತು ಹಿಸುಕಿ ಆಕೆಯನ್ನು ಕೊಂದಿರುವ ಸಾಧ್ಯತೆಯಿದೆ. ಮರಣೋತ್ತರ ಪರೀಕ್ಷೆಯ ನಂತರವೇ ಹೆಚ್ಚಿನ ವಿವರಗಳನ್ನು ಕಂಡುಹಿಡಿಯಬಹುದು ಎಂದು ಅವರು ಹೇಳಿದರು. ಆರೋಪಿ ಪೊಲೀಸ್ ಕಸ್ಟಡಿಯಲ್ಲಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಬಾವಿಯಲ್ಲಿ ಅನುಮಾನಾಸ್ಪದ ರೀತಿ ಯುವತಿ ಶವವಾಗಿ ಪತ್ತೆ