ಭೋಜ್‌ಪುರ (ಬಿಹಾರ): ದೇಶದಲ್ಲಿ ವರದಕ್ಷಿಣೆ ಇನ್ನೂ ಸಾಮಾಜಿಕ ಪಿಡುಗಾಗಿಯೇ ಕಾಡುತ್ತಲೇ ಇದೆ. ಆಧುನಿಕ ಸಮಾಜ ಇಷ್ಟೊಂದು ಮುಂದುವರೆದಿದ್ದರೂ ವರದಕ್ಷಿಣೆಗೆ ಮಹಿಳೆಯರ ಬಲಿಯಾಗುವುದು ಮಾತ್ರ ನಿಂತಿಲ್ಲ. ಇಲ್ಲೊಂದು ಪ್ರಕರಣದಲ್ಲಿ ಗಂಡನ ಮನೆಯುವರು ಮಹಿಳೆಯನ್ನು ಕೊಲೆ ಮಾಡಿ, ಬೆಂಕಿ ಹಚ್ಚಿದ್ದಾರೆ. ಈ ಸಂದರ್ಭದಲ್ಲಿ ಆಕೆಯ ಕಾಲಿನ ಭಾಗ ಹೊರಗೆ ಬಿದ್ದಿದೆ. ಅದೇ ಕಾಲನ್ನು ಆಕೆಯ ತಂದೆ ಚೀಲದಲ್ಲಿ ಹಾಕಿಕೊಂಡು ಪೊಲೀಸ್ ಠಾಣೆಗೆ ಬಂದಿದ್ದಾರೆ.
ಬಿಹಾರದ ಭೋಜ್‌ಪುರ ಜಿಲ್ಲೆಯ ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬರೌಲಿ ಗ್ರಾಮದಲ್ಲಿ ಈ ಆಘಾತಕಾರಿ ಹಾಗೂ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಮಮತಾ ದೇವಿ ಎಂದು ಗುರುತಿಸಲಾಗಿದೆ.
ವರ್ಷದ ಹಿಂದೆಯಷ್ಟೇ ಮದುವೆಯಾಗಿತ್ತು: ಬರೌಲಿ ಗ್ರಾಮದ ಶತ್ರುಘ್ನ ಎಂಬಾತನಿಗೆ ಮಮತಾರನ್ನು ಮದುವೆ ಮಾಡಿಕೊಡಲಾಗಿತ್ತು. 2021ರ ಮೇ ತಿಂಗಳದಲ್ಲಿ ಇವರ ಮದುವೆಯಾಗಿದೆ. ತವರು ಮನೆಯವರು ವರದಕ್ಷಿಣೆ ರೂಪದಲ್ಲಿ ಸ್ವಲ್ಪ ಹಣ ಕೊಟ್ಟಿದ್ದರು. ಆದರೂ, ಎರಡು ಲಕ್ಷ ರೂ. ಹಣ ತರುವಂತೆ ಮಮತಾರಿಗೆ ಕಿರುಕುಳ ನೀಡಲಾಗುತ್ತಿತ್ತು ಎನ್ನಲಾಗಿದೆ.
ಆದರೆ, ಮಮತಾ ಪೋಷಕರು ಬಡವರಾಗಿದ್ದು, ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಗಂಡನ ಮನೆಯವರೆಗೆ ಹಣ ತಂದು ಕೊಡಲು ಆಗಿರಲಿಲ್ಲ. ಇದೇ ಕಾರಣಕ್ಕೆ ಗಂಡ ಶತ್ರುಘ್ನ ಮತ್ತು ಮಾವ ರಾಮ್ ಹಾಗೂ ಅತ್ತೆ ಸೇರಿಕೊಂಡು ಮಮತಾರನ್ನು ಮನೆಯಲ್ಲಿ ಕೊಲೆ ಮಾಡಿದ್ದಾರೆ. ನಂತರ ಸೋನ್ ನದಿಯ ದಡಗೆ ಮೃತದೇಹ ಸಾಗಿಸಿ ಹೂತು ಹಾಕಿದ್ದಾರೆ. ಅಲ್ಲದೇ, ಇಷ್ಟು ಸಾಲದೆಂಬಂತೆ ನಂತರ ತಮ್ಮ ಕೃತ್ಯವನ್ನು ಮುಚ್ಚಿ ಹಾಕಲು ಹೂತ ಶವ ತೆಗೆದು ಸುಟ್ಟು ಹಾಕಲು ಯತ್ನಿಸಿದ್ದಾರೆ.
ಕಾಲು ಮಾತ್ರ ಉಳಿದುಕೊಂಡಿತ್ತು: ಮಮತಾರನ್ನು ಸುಟ್ಟು ಹಾಕುವ ವಿಷಯ ತಿಳಿದ ಆಕೆಯ ಕುಟುಂಬಸ್ಥರು ನದಿ ದಡಕ್ಕೆ ಬಂದಿದ್ದಾರೆ. ಈ ವೇಳೆ ಅರೆಬೆಂದ ಸ್ಥಿತಿಯಲ್ಲಿ ಮೃತದೇಹವನ್ನು ನೋಡಿ, ಬೆಂಕಿ ನಂದಿಸಲು ಪ್ರಯತ್ನಪಟ್ಟಿದ್ದಾರೆ. ಆದರೆ, ಆಕೆಯ ಎಡಗಾಲು ಮಾತ್ರ ಬೆಂಕಿಯಲ್ಲಿ ಸುಡದೇ ಉಳಿದಿದೆ. ಆಗ ಪಾದದಲ್ಲಿನ ಕಾಲುಂಗುರ ಕಂಡು ಇದು ಮಮತಾರದ್ದೇ ಎಂದು ಕುಟುಂಬಸ್ಥರು ಗುರುತಿಸಿದ್ದಾರೆ. ನಂತರ ಆ ಕಾಲನ್ನು ಆಕೆಯ ತಂದೆ ಒಂದು ಚೀಲದಲ್ಲಿ ಹಾಕಿಕೊಂಡು ಪೊಲೀಸ್ ಠಾಣೆಗೆ ಬಂದಿದ್ದಾರೆ.
ಡಿಎನ್‌ಎ ಪರೀಕ್ಷೆಗೆ ಕಾಲು ರವಾನೆ: ಬೆಂಕಿಯಲ್ಲಿ ಇಡೀ ದೇಹ ಸುಟ್ಟು ಹೋಗಿರುವ ಕಾರಣ ಇದು ಮಮತಾರ ಶವ ಎಂದೇ ಪತ್ತೆ ಹೆಚ್ಚಲು ಪೊಲೀಸರು ಡಿಎನ್‌ಎ ಪರೀಕ್ಷೆಯ ಮೊರೆ ಹೋಗಿದ್ದಾರೆ. ಹೀಗಾಗಿ ಬೆಂಕಿಯಿಂದ ಅರೆಬೆಂದ ಕಾಲನ್ನು ಪಾಟ್ನಾದ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಮಮತಾರ ಪಾಪಿ ಗಂಡ ಹಾಗೂ ಮಾವ ಸೇರಿ ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತೆ ಮೇಲೆಯೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಮಾವ!