ಕಡಬ(ದಕ್ಷಿಣ ಕನ್ನಡ): ಲೈಂಗಿಕ ದೌರ್ಜನ್ಯ ನಡೆಸಿ ಯುವತಿಯನ್ನು ಗರ್ಭಿಣಿಯಾಗಿಸಿ ಬಳಿಕ ಗರ್ಭಪಾತ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ಠಾಣೆ ಕಾನ್ಸ್‌ಟೇಬಲ್ ಶಿವರಾಜ್ ನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಈ ಯುವತಿ ಈಗಾಗಲೇ ಅತ್ಯಾಚಾರ ಸಂತ್ರಸ್ತೆಯಾಗಿದ್ದಳು ಈ ಘಟನೆ ಸಂಬಂಧ ಯುವತಿ ಮನೆಗೆ ಸಮನ್ಸ್, ತನಿಖೆಯ ನೆಪವೊಡ್ಡಿ ಭೇಟಿ ನೀಡುತ್ತಿದ್ದ ಬಂಧಿತ ಆರೋಪಿ, ಯುವತಿಗೆ ಮದುವೆಯಾಗುತ್ತೇನೆಂದು ನಂಬಿಸಿ ಆಕೆಯೊಂದಿಗೆ ಸಲುಗೆಯಿಂದ ನಡೆದುಕೊಂಡಿದ್ದಾನೆ . ಲೈಂಗಿಕವಾಗಿ ಬಳಸಿಕೊಂಡ ನಂತರ ಯುವತಿ ಗರ್ಭವತಿಯಾಗಿದ್ದಾಳೆ.
ಇದನ್ನು ತಿಳಿದ ಕಾನ್ಸ್‌ಟೇಬಲ್, ಯುವತಿಯನ್ನು ಮಂಗಳೂರಿಗೆ ಕರೆದೊಯ್ದು ಗರ್ಭಪಾತ ಮಾಡಿಸಿ ಗೃಹಬಂಧನದಲ್ಲಿ ಇರಿಸಿದ್ದಾನೆಂದು ಯುವತಿ ತಂದೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇದೇ ಸಮಯದಲ್ಲಿ ಬೆಂಗಳೂರಿನಲ್ಲಿನ ಸಾಮಾಜಿಕ ಸಂಘಟನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಹಾಗೂ ಆರೋಪಿಯನ್ನು ಸೇವೆಯಿಂದ ವಜಾಗೊಳಿಸಿ ಪೊಲೀಸ್ ಇಲಾಖೆಗೆ ಉಂಟಾದ ಕಳಂಕ ನಿವಾರಿಸಬೇಕು ಎಂದು ಒತ್ತಾಯಿಸಿದ್ದರು. ಗರ್ಭಪಾತ ಮಾಡಿಸಿದ್ದೇ ಆಗಿದ್ದಲ್ಲಿ ಕೃತ್ಯಕ್ಕೆ ಸಹಕರಿಸಿದ ವೈದ್ಯರ ವಿರುದ್ಧವೂ ತನಿಖೆಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ದೂರನ್ನು ನೀಡಿದ್ದರು.
ಈ ಬಗ್ಗೆ ಮಾಹಿತಿ ಪಡೆದ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ.ಋಷಿಕೇಶ್ ಭಗವಾನ್ ಸೋನಾವಣೆ ಹಾಗೂ ಪುತ್ತೂರು ಡಿವೈಎಸ್ಪಿ ಡಾ.ಗಾನಾ ಪಿ.ಕುಮಾರ್ ಅವರು ಕಡಬ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೀಗ ಪೊಲೀಸ್ ಸಿಬ್ಬಂದಿ ಶಿವರಾಜ್ ನನ್ನು ವಶಕ್ಕೆ ಪಡೆದಿರುವ ಕಡಬ ಪೊಲೀಸರು, ಆತನ ವಿರುದ್ಧ ಐಪಿಸಿ 506, ಪೋಕ್ಸೋ ಆ್ಯಕ್ಟ್ 2012 ಸೇರಿ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.