ಮುಜಾಫರ್ನಗರ (ಉತ್ತರ ಪ್ರದೇಶ): ಪತ್ನಿಯೇ ಪತಿಯ ಗುಪ್ತಾಂಗ ಕತ್ತರಿಸಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ನಡೆದಿದೆ. ಈಗಾಗಲೇ ಎರಡು ಮದುವೆಯಾಗಿದ್ದ ಪತಿ ಮತ್ತೊಂದು ವಿವಾಹವಾಗಲು ಹೊರಟಿದ್ದಕ್ಕೆ ಈ ಕೃತ್ಯ ಎಸಗಿದ್ದಾಳೆಂದು ಹೇಳಲಾಗಿದೆ.
ಮೃತ ವ್ಯಕ್ತಿಯು ಮುಜಾಫರ್ನಗರದ ಶಿಕಾರ್‌ಪುರ ಗ್ರಾಮದಲ್ಲಿನ ಮಸೀದಿಯೊಂದರಲ್ಲಿ ಮೌಲ್ವಿಯಾಗಿದ್ದು, ಬುಧವಾರ ರಾತ್ರಿ ಅವರ ಮನೆಯಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆತನ ಗುಪ್ತಾಂಗ ಸೇರಿ ದೇಹದಲ್ಲಿ ಗಾಯದ ಗುರುತುಗಳಿದ್ದವು. ಗುಪ್ತಾಂಗ ಕತ್ತರಿಸಿದ್ದರಿಂದಲೇ ಆತ ಅಸುನೀಗಿರುವುದಾಗಿ ಪೊಲೀಸರು ಹೇಳಿದ್ದಾರೆ. ಪ್ರಕರಣ ಬೆನ್ನತ್ತಿದ ಪೊಲೀಸರು, ಪತ್ನಿಯನ್ನು ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ಆಕೆ ತಪ್ಪೊಪ್ಪಿಕೊಂಡಿದ್ದಾಳೆ.
ಇದನ್ನೂ ಓದಿ: Girl friend ಮೇಲೆ ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರ ಎಸಗಿದ ಬಾಯ್ಫ್ರೆಂಡ್
ತನ್ನ ಪತಿಗೆ ನಾನು ಎರಡನೇ ಹೆಂಡತಿ. ನನಗೆ ಹದಿಹರೆಯದ ವಯಸ್ಸಿನ ಮಗಳಿದ್ದಾಳೆ. ಆದರೆ ಆತ ಮತ್ತೊಂದು ಮದುವೆಯಾಗುವುದಾಗಿ ಹೇಳಿ ನನಗೆ ಕಿರುಕುಳ ನೀಡುತ್ತಿದ್ದ. ಹೇಗಾದರೂ ಮಾಡಿ ಅವನು ಇನ್ನೊಬ್ಬಳನ್ನು ವರಿಸುವ ಮುನ್ನ ಮಗಳ ವಿವಾಹ ಮಾಡಬೇಕೆಂದಿದ್ದೆ. ಆದರೆ ದಿನೇ ದಿನೇ ಜಗಳ ದೊಡ್ಡದಾಗುತ್ತಾ ಹೋಗಿದ್ದು ಇದರಿಂದ ಬೇಸತ್ತು ಕೃತ್ಯ ಎಸಗಿದ್ದಾಗಿ ಆರೋಪಿ ಪತ್ನಿ ಹೇಳಿದ್ದಾಳೆ. ಸದ್ಯ ಆಕೆಯನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.