ಉನ್ನಾವೊ (ಉತ್ತರ ಪ್ರದೇಶ): ಕೋವಿಡ್ ನಿಯಮ ಉಲ್ಲಂಘಿಸಿದ್ದಾನೆಂದು ಪೊಲೀಸರ ಥಳಿತಕ್ಕೊಳಗಾಗಿದ್ದ ತರಕಾರಿ ವ್ಯಾಪಾರಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿ ನಡೆದಿದೆ.
17 ವರ್ಷದ ಫೈಸಲ್ ಮೃತಪಟ್ಟ ತರಕಾರಿ ವ್ಯಾಪಾರಿ. ರಾಜ್ಯದಲ್ಲಿ ಕಠಿಣ ಕೊರೊನಾ ಕರ್ಫ್ಯೂ ಜಾರಿಯಲ್ಲಿದ್ದು, ಉನ್ನಾವೊದ ಬಂಗರ್ಮೌ ಕೊಟ್ವಾಲಿ ಪ್ರದೇಶದಲ್ಲಿನ ಮಾರುಕಟ್ಟೆಯೊಂದರ ಬಳಿ ಈತ ಬಂಡಿಯಲ್ಲಿ ತರಕಾರಿ ಮಾರುತ್ತಿರುವುದನ್ನು ನೋಡಿದ ಪೊಲೀಸ್ ಸಿಬ್ಬಂದಿ ಆತನನ್ನು ಥಳಿಸಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ಕರೆದೊಯದ್ದಿದ್ದು, ಅಲ್ಲಿ ಆತ ಮೃತಪಟ್ಟಿದ್ದಾನೆ. ಸಾವನ್ನಪ್ಪಿದ ಬಳಿಕ ಮೃತದೇಹವನ್ನು ಆಸ್ಪತ್ರೆಯಲ್ಲಿ ತಂದು ಹಾಕಿದ್ದಾರೆ ಎಂದು ಫೈಸಲ್ನ ಸಹೋದರ ಆರೋಪಿಸಿದ್ದಾರೆ.
ಇದನ್ನೂ ಓದಿ: ಠಾಣೆಗೆ ಕರೆದು ದಲಿತ ಯುವಕನಿಗೆ ಮೂತ್ರ ಕುಡಿಸಿದ ಪಿಎಸ್ಐ; ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ
ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಒಬ್ಬ ವ್ಯಕ್ತಿಯನ್ನು ಠಾಣೆಗೆ ಕರೆತರಲಾಯಿತು. ಈ ವೇಳೆ ಆತ ಅನಾರೋಗ್ಯಕ್ಕೆ ಒಳಗಾಗಿದ್ದು, ತಕ್ಷಣವೇ ಬಂಗರ್ಮೌನಲ್ಲಿರುವ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದೆವು. ಆದರೆ ಆತ ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟಿದ್ದಾನೆಂದು ಉನ್ನಾವೊ ಎಎಸ್ಪಿ ಶಶೀಶೇಖರ್ ಸಿಂಗ್ ಹೇಳಿದ್ದಾರೆ.
ಈ ಘಟನೆ ಸಂಬಂಧ ಎಫ್‌ಐಆರ್ ದಾಖಲಿಸಿದ್ದು, ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳನ್ನು ಅಮಾನತುಗೊಳಿಸಲಾಗಿದೆ ಎಂದು ಉನ್ನಾವೊ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಲಕರ್ಣಿ ತಿಳಿಸಿದ್ದಾರೆ. ಘಟನೆಯಿಂದ ಮನನೊಂದಿರುವ ಫೈಸಲ್ ಸಂಬಂಧಿಕರು ಹಾಗೂ ಸ್ಥಳೀಯರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.