ಕಡಪಾ (ಆಂಧ್ರ ಪ್ರದೇಶ): ಎಟಿಎಂಗಳಿಗೆ ಹಣ ತುಂಬಿಸುವ ವಾಹನದಲ್ಲಿದ್ದ 60 ಲಕ್ಷ ರೂಪಾಯಿಗಳೊಂದಿಗೆ ವಾಹನ ಸಮೇತ ಡ್ರೈವರ್ ಪರಾರಿಯಾಗಿರುವ ಘಟನೆ ನಡೆದಿದೆ. ನಗರದ ಹಲವಾರು ಎಟಿಎಂಗಳಿಗೆ ಹಣ ತುಂಬಿಸುವ ಸಿಎಂಎಸ್ ಏಜೆನ್ಸಿಯ ವಾಹನವೊಂದನ್ನು ಅದರ ಚಾಲಕನೇ ತೆಗೆದುಕೊಂಡು ಪರಾರಿಯಾಗಿದ್ದಾನೆ.
ಸಿಎಂಎಸ್ ಏಜೆನ್ಸಿಯ ಕ್ಯಾಶ್ ವಾಹನವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಪ್ರತಿದಿನ ಲಕ್ಷಾಂತರ ರೂಪಾಯಿ ಹಣ ತೆಗೆದುಕೊಂಡು ವಿವಿಧ ಎಟಿಎಂಗಳಿಗೆ ತುಂಬಿಸಲು ಹೊರಡುತ್ತದೆ. ವಾಹನದಲ್ಲಿ ಓರ್ವ ತಾಂತ್ರಿಕ ಸಿಬ್ಬಂದಿ ಮತ್ತು ಓರ್ವ ಸೆಕ್ಯೂರಿಟಿ ಗಾರ್ಡ್ ಇರುತ್ತಾರೆ. ಪ್ರತಿದಿನದ ಡ್ಯೂಟಿಯ ಪ್ರಕಾರ ಸಿಎಂಎಸ್ ಕ್ಯಾಶ್ ವಾಹನ 80 ಲಕ್ಷ ರೂಪಾಯಿ ಕ್ಯಾಶ್ ತೆಗೆದುಕೊಂಡು ಹೊರಟಿದೆ.
ಕಡಪಾದವನೇ ಆದ ಶಾರುಖ್ ಎಂಬಾತ ವ್ಯಾನ್ ಡ್ರೈವರ್ ಆಗಿದ್ದ. ಕಡಪಾದ ಐಟಿಐ ಜಂಕ್ಷನ್ನಲ್ಲಿರುವ ಎಸ್ಬಿಐ ಎಟಿಎಂಗೆ ಹಣ ತುಂಬಿಸಲು ವಾಹನ ನಿಂತಿದೆ. ಈ ಸಂದರ್ಭದಲ್ಲಿ ಸೆಕ್ಯೂರಿಟಿ ಗಾರ್ಡ್ ಎಟಿಎಂ ಹೊರಗೆ ಕಾವಲಿಗಿದ್ದು, ತಾಂತ್ರಿಕ ಸಿಬ್ಬಂದಿ ಹಣ ತುಂಬಿಸುತ್ತಿದ್ದರು. ಇದನ್ನೇ ಕಾಯುತ್ತಿದ್ದ ಡ್ರೈವರ್ ಶಾರುಖ್, ಇನ್ನೂ 60 ಲಕ್ಷ ರೂಪಾಯಿಗಳಿದ್ದ ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ.
ಕಡಪಾ ಹೊರವಲಯದ ವಿನಾಯಕ ನಗರ ಎಂಬಲ್ಲಿ ವಾಹನ ಬಿಟ್ಟು ಅದರಲ್ಲಿನ ಕ್ಯಾಶ್ ಬಾಕ್ಸ್ಗಳನ್ನು ಮಾತ್ರ ತೆಗೆದುಕೊಂಡು ಶಾರುಖ್ ಪರಾರಿಯಾಗಿದ್ದಾನೆ. ಎಸ್ಬಿಐ ಅಧಿಕಾರಿಗಳು ಘಟನೆಯ ಕುರಿತು ಕಡಪಾ ತಾಲೂಕು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಡ್ರೈವರ್ನ ಪತ್ತೆಗೆ ಬಲೆ ಬೀಸಿದ್ದಾರೆ.