ಫಿರೋಜಾಬಾದ್ (ಉತ್ತರ ಪ್ರದೇಶ): ಏಳು ವರ್ಷಗಳ ಹಿಂದೆ ಎಂಟು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಪರಾಧಿಗೆ 30 ಸಾವಿರ ರೂಪಾಯಿ ದಂಡ ಕೂಡ ವಿಧಿಸಲಾಗಿದ್ದು, ಇದರಲ್ಲಿ ಅರ್ಧದಷ್ಟು ಮೊತ್ತವನ್ನು ಮಗುವಿಗೆ ನೀಡುವಂತೆ ಆದೇಶಿಸಲಾಗಿದೆ.
ಪ್ರಕರಣದ ವಿವರ: ಎಫ್‌ಐಆರ್ ಪ್ರಕಾರ, ಮೇ 14, 2015 ರಂದು ಶಿಕ್ಷಕ ವಿಜೇಂದ್ರ ಪಾಲ್ ಸಿಂಗ್ ಎಂಬಾತ ಮಗುವನ್ನು ಶಾಲೆಯ ಛಾವಣಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಾಲಕನ ಕುಟುಂಬವರು ದೂರು ನೀಡಿದ ನಂತರ, ಶಿಕ್ಷಕನ ವಿರುದ್ಧ ಐಪಿಸಿ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧಗಳು), 507 (ಕ್ರಿಮಿನಲ್ ಬೆದರಿಕೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ನಾರ್ಖಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಮಗುವನ್ನು ಹೊಡೆದು ಕೊಲ್ಲುವುದಾಗಿ ಸಿಂಗ್ ಬೆದರಿಕೆ ಹಾಕಿದ್ದ. ಮಗುವಿನ ಆರೋಗ್ಯ ಹದಗೆಟ್ಟ ನಂತರ ಹಲ್ಲೆ ನಡೆದಿರುವ ವಿಷಯ ತಿಳಿಯಿತು ಎಂದು ಸಂತ್ರಸ್ತ ಬಾಲಕನ ತಂದೆ ದೂರಿನಲ್ಲಿ ತಿಳಿಸಿದ್ದಾರೆ.
ಪಾಲಕರು ಮಗುವನ್ನು ವಿಚಾರಿಸಿದಾಗ ನಡೆದ ಘಟನೆಯನ್ನು ವಿವರಿಸಿದ್ದು, ಕಳೆದ ಹಲವು ದಿನಗಳಿಂದ ಶಿಕ್ಷಕ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದಾಗಿ ತಿಳಿಸಿದೆ. ಆರೋಪಿಗಳೊಂದಿಗೆ ರಾಜಿ ಮಾಡಿಕೊಳ್ಳುವಂತೆ ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂದು ಬಾಲಕನ ತಂದೆ ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲ ಸಂಜೀವ್ ಶರ್ಮಾ, ಸಿಆರ್ಪಿಸಿ 164 (ತಪ್ಪೊಪ್ಪಿಗೆಗಳು ಮತ್ತು ಹೇಳಿಕೆಗಳ ರೆಕಾರ್ಡಿಂಗ್) ಅಡಿಯಲ್ಲಿ ನ್ಯಾಯಾಲಯದಲ್ಲಿ ಮಗುವಿನ ಹೇಳಿಕೆಯು ಪ್ರಕರಣದಲ್ಲಿ ಮಹತ್ವದ ಪಾತ್ರ ವಹಿಸಿದೆ. ಆರೋಪಿ ತಾನು ತಪ್ಪಿತಸ್ಥನೆಂದು ಸಾಬೀತಾದ ನಂತರ ಕಡಿಮೆ ಕಠಿಣ ಶಿಕ್ಷೆಗಾಗಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದ. ಆದರೆ ಈತ ಘೋರ ಅಪರಾಧ ಎಸಗಿದ್ದಾರೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ.
ಇದನ್ನೂ ಓದಿ: 17 ವರ್ಷದ ಬಾಲಕನನ್ನು ವರಿಸಿದ 19ರ ಯುವತಿ ವಿರುದ್ಧ ಪೊಕ್ಸೊ ಕೇಸ್