ಬದೌನ್ (ಉತ್ತರ ಪ್ರದೇಶ): 2017ರಲ್ಲಿ ನಡೆದ ಯುವ ಜೋಡಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಸ್ಥಳೀಯ ನ್ಯಾಯಾಲಯವು ಒಂದೇ ಕುಟುಂಬದ ನಾಲ್ವರಿಗೆ ಮರಣದಂಡನೆ ವಿಧಿಸಿದೆ. ಜಿಲ್ಲಾ ನ್ಯಾಯಾಧೀಶ ಪಂಕಜ್ ಅಗರವಾಲ್ ಅವರು ಕಿಶನ್‌ಪಾಲ್, ಅವರ ಪತ್ನಿ ಜಲಧಾರ ಮತ್ತು ಅವರ ಪುತ್ರರಾದ ವಿಜಯಪಾಲ್ ಮತ್ತು ರಾಮ್‌ವೀರ್‌ಗೆ ಗುರುವಾರ ಮರಣದಂಡನೆ ವಿಧಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ವಕೀಲ ಅನಿಲ್ ಕುಮಾರ್ ಸಿಂಗ್ ಹೇಳಿದ್ದಾರೆ.
ಮೇ 14, 2017 ರಂದು ಉರೈನ ಗ್ರಾಮದ ನಿವಾಸಿ ಪಪ್ಪು ಸಿಂಗ್ ಎಂಬುವರು ತಮ್ಮ ಮಗ ಗೋವಿಂದ್ (24) ಮತ್ತು ಕಿಶನ್‌ಪಾಲ್ ಅವರ ಪುತ್ರಿ ಆಶಾ (22) ಅವರ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ನಾಲ್ವರು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾರೆ ಎಂದು ದೂರು ನೀಡಿದ್ದರು. ಕೊಲೆಗೂ ಮುನ್ನ ಗೋವಿಂದ್ ಮತ್ತು ಆಶಾ ಅವರನ್ನು ಮದುವೆಯ ನೆಪದಲ್ಲಿ ದೆಹಲಿಯಿಂದ ಗ್ರಾಮಕ್ಕೆ ಕರೆಸಿಕೊಳ್ಳಲಾಗಿತ್ತು.
ನಂತರ ಗೋವಿಂದ್ನ ತಲೆಗೆ ಕಿಶನ್‌ಪಾಲ್ ಹಿಂಬದಿಯಿಂದ ಕೊಡಲಿಯಿಂದ ಹೊಡೆದು ಕೊಂದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ನಾಲ್ವರು ಆರೋಪಿಗಳು ಆಶಾ ಅವರ ಮೇಲೆ ಹಲ್ಲೆ ನಡೆಸಿ ಅವರನ್ನು ಕೂಡ ಕೊಂದಿದ್ದರು.
ಇಬ್ಬರೂ ಪ್ರೇಮಿಗಳಿಗೆ ಗ್ರಾಮದಲ್ಲಿ ತಮ್ಮ ಕುಟುಂಬಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದೆಹಲಿಗೆ ಹೋಗಿ ನೆಲೆಸಿದ್ದರು. ಎರಡೂ ಕುಟುಂಬದವರು ಗ್ರಾಮದಲ್ಲಿ ತಮ್ಮ ಮಕ್ಕಳ ಶವಗಳನ್ನು ತೆಗೆದುಕೊಂಡು ಹೋಗುವುದನ್ನು ನೋಡಿ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದೇ ದಿನ ಸ್ಥಳಕ್ಕಾಗಮಿಸಿದ್ದ ಪೊಲೀಸರು ಕಿಶನ್ ಪಾಲ್ ನನ್ನು ಬಂಧಿಸಿದ್ದರು. ನಂತರ ಕುಟುಂಬದ ಇತರ ಸದಸ್ಯರನ್ನು ಬಂಧಿಸಲಾಗಿತ್ತು.
ಇದನ್ನು ಓದಿ:ಕೇರಳದಲ್ಲಿ ಕಲ್ಲು ತೂರಾಟ: ರಕ್ಷಣೆಗಾಗಿ ಹೆಲ್ಮೆಟ್ ಧರಿಸಿ ಬಸ್ ಚಾಲನೆ, ವಿಡಿಯೋ