ಚಿಕ್ಕಮಗಳೂರು: ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆ, ಮೂವರಿಗೆ ಜೈಲು ಶಿಕ್ಷೆ ವಿಧಿಸಿ ಎನ್ಆರ್ ಪುರ ನ್ಯಾಯಾಲಯ ಮಹತ್ವದ ಆದೇಶ ಮಾಡಿದೆ.
ಎಲ್ಲಾಪುರ ತಾಲೂಕಿನಲ್ಲಿ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಆಲ್ದಾರ ಬೈರಾಪುರದ ದುಗ್ಗಪ್ಪ ಗೌಡ, ಎಚ್. ಮಹೇಶ, ಎಂ.ಬಾಬು ಎಂಬುವರಿಗೆ 2 ವರ್ಷ 6 ತಿಂಗಳು ಜೈಲು, 8 ಸಾವಿರ ರೂ. ದಂಡವನ್ನು ಎನ್ಆರ್ ಪುರದ ಜೆಎಂಎಫ್‌ಸಿ ಕೋರ್ಟ್ ವಿಧಿಸಿದೆ.
2015ರ ಜೂನ್ ತಿಂಗಳಿನಲ್ಲಿ ಮಳೆಗಾಳಿಗೆ ಬೈರಾಪುರದ ಆಲ್ದಾರ್‌ನ ಸರ್ವೆ ನಂ.69ರ ಗದ್ದೆಯಲ್ಲಿ ವಿದ್ಯುತ್ ಕಂಬಗಳು ಉರುಳಿದ್ದವು. ವಿದ್ಯುತ್ ಹರಿದು ಎರಡು ರಾಸು ಸಾವಿಗೀಡಾಗಿದ್ದವು. ಮೆಸ್ಕಾಂ ಸಹಾಯಕ ಎಂಜಿನಿಯರ್ ಎಚ್.ಪಿ. ಗೌತಮ್ ಮತ್ತು ನೌಕರ ಡಿ. ಪ್ರಶಾಂತ ಕುಮಾರ ಸ್ಥಳ ಪರಿಶೀಲನೆಗೆ ತೆರಳಿದ್ದರು.
ಈ ಸಂದರ್ಭದಲ್ಲಿ ದುಗ್ಗಪ್ಪ ಗೌಡ, ಮಹೇಶ, ಬಾಬು ಆ ನೌಕರರಿಗೆ ಅವಾಚ್ಯ ಪದಗಳಿಂದ ನಿಂದಿಸಿ, ಕಟ್ಟಿಂಗ್ ಪ್ಲೇಯರ್‌ನಿಂದ ಥಳಿಸಿ, ಪ್ರಾಣ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಎನ್.ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಅವರ ಆರೋಪ ಸಾಬೀತಾದ ಹಿನ್ನೆಲೆ, ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ನೀಡಿದೆ.