ಹಾವೇರಿ: ಇತ್ತೀಚೆಗೆ ಜಿಲ್ಲೆಯಲ್ಲಿ ಬಂಗಾರದ ಅಂಗಡಿಗಳಲ್ಲಿ ಕಳ್ಳತನ ಅಧಿಕವಾಗುತ್ತಿದ್ದು, ನಿನ್ನೆ ಜ್ಯುವೆಲ್ಲರಿ ಶಾಪ್ಗೆ ನುಗ್ಗಿದ ಖದೀಮರು 2 ಲಕ್ಷಕ್ಕೂ ಅಧಿಕ ರೂ. ಬೆಲೆ ಬಾಳುವ ಬೆಳ್ಳಿಯ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಗುತ್ತಲದ ತರಳಬಾಳು ಜ್ಯುವೆಲರ್ಸ್‌ಗೆ ನುಗ್ಗಿದ ಕಳ್ಳರು ಎರಡೂವರೆ ಕೆ.ಜಿ ಬೆಳ್ಳಿಯ ಆಭರಣಗಳನ್ನು ಕದ್ದಿದ್ದರು. ಈ ಘಟನೆ ಮಾಸುವ ಮುನ್ನವೇ ಇದೀಗ ಹಾವೇರಿಯ ಲಾಲ್ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿರುವ ಬಂಗಾರದಂಗಡಿಯೊಂದರಲ್ಲಿ ಮೂರು ಕೆಜಿ ಬೆಳ್ಳಿ ಆಭರಣ ದೋಚಿ ಪರಾರಿಯಾಗಿದ್ದಾರೆ.
ಇನ್ನು ಈ ಎರಡೂ ಕಳ್ಳತನ ಪ್ರಕರಣಗಳನ್ನು ಮೇಲ್ನೋಟಕ್ಕೆ ಒಂದೇ ಗ್ಯಾಂಗ್ ಮಾಡಿರುವಂತೆ ಕಂಡು ಬಂದಿದೆ. ಕಳ್ಳತನಕ್ಕೂ ಮೊದಲು ಸಿಸಿಟಿವಿ ಕ್ಯಾಮೆರಾಗಳಿಗೆ ಬಟ್ಟೆ ಸುತ್ತಿ ತಮ್ಮ ಕೆಲಸ ಮುಗಿಯುತ್ತಿದ್ದಂತೆ ನಾಪತ್ತೆಯಾಗಿದ್ದಾರೆ.
ಜಿಲ್ಲೆಯಲ್ಲಿ ಕೇವಲ ಬಂಗಾರದ ಅಂಗಡಿಯಲ್ಲಿ ಕಳ್ಳತನ ನಡೆಯುತ್ತಿರುವುದು ಮಾತ್ರವಲ್ಲದೇ ಬೈಕ್ ಕಳ್ಳತನ, ಸರಗಳ್ಳತನ, ಮೊಬೈಲ್ ಕಳ್ಳತನ ನಡೆಯುತ್ತಿದ್ದು, ಈ ಕುರಿತಂತೆ ಪೊಲೀಸ್ ಇಲಾಖೆಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.