ನವದೆಹಲಿ: ಯುವ ಕುಸ್ತಿಪಟು ಸಾಗರ್ ರಾಣಾ ಕೊಲೆ ಪ್ರಕರಣದಲ್ಲಿ ಸಿಲುಕಿ ಬಂಧನದಿಂದ ತಲೆಮರೆಸಿಕೊಂಡಿರುವ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಅವರು ಉತ್ತರ ಪ್ರದೇಶದ ಮೀರತ್ನಲ್ಲಿ ಸಂಚರಿಸಿರುವ ಬಗ್ಗೆ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ದೆಹಲಿ ಪೊಲೀಸರ ಮೂಲಗಳ ಪ್ರಕಾರ, ಮೀರತ್ ಟೋಲ್ ಪ್ಲಾಜಾ ಬಳಿಯ ಸಿಸಿಟಿವಿ ವಿಡಿಯೋವನ್ನು ಪರಿಶೀಲಿಸಲಾಗಿದೆ. ವಿಡಿಯೋದಿಂದ ಫೋಟೋ ತೆಗೆಯಲಾಗಿದ್ದು ಇದರಲ್ಲಿ ಸುಶೀಲ್ ಕುಮಾರ್ ಇನ್ನೊಬ್ಬ ವ್ಯಕ್ತಿಯೊಂದಿಗೆ ಕಾರಿನಲ್ಲಿ ಕುಳಿತಿರುವುದು ಗೋಚರಿಸುತ್ತದೆ. ಬಿಳಿ ಬಣ್ಣದ ಟೀ ಶರ್ಟ್ ಧರಿಸಿದ ವ್ಯಕ್ತಿಯೇ ಸುಶೀಲ್ ಕುಮಾರ್ ಎಂದು ಪೊಲೀಸರು ಹೇಳುತ್ತಾರೆ.
ಕೊಲೆ ನಡೆದ ನಂತರದ ಅಂದರೆ ಮೇ 6ರ ಫೋಟೋ ಇದಾಗಿದೆ. ಈ ಫೋಟೋ ಆಧಾರದ ಮೇಲೆ ಸುಶೀಲ್ ಕುಮಾರ್ ಈಗ ಎಲ್ಲಿ ಅಡಗಿದ್ದಾರೆಂದು ತಿಳಿಯಲು ದೆಹಲಿ ಪೊಲೀಸರು ಆ ಕಾರನ್ನು ಹುಡುಕುತ್ತಿದ್ದಾರೆ. ಅಲ್ಲದೇ ಸುಶೀಲ್ ಜೊತೆ ಡ್ರೈವಿಂಗ್ ಸೀಟ್ನಲ್ಲಿ ಕುಳಿತಿರುವ ಆ ವ್ಯಕ್ತಿಯನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ: ಕುಸ್ತಿಪಟು ಸಾಗರ್ ಹತ್ಯೆ ಪ್ರಕರಣ: ಸುಶೀಲ್ ಕುಮಾರ್ಗೆ ಸಿಗದ ಜಾಮೀನು, ವಾರಂಟ್ ಜಾರಿ
ಪ್ರಕರಣವೇನು?
ಮೇ 4 ರಂದು ದೆಹಲಿಯ ಛತ್ರಸಾಲ ಸ್ಟೇಡಿಯಂನಲ್ಲಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಕುಸ್ತಿಪಟು ಸಾಗರ್ ರಾಣಾ ಹಲ್ಲೆಗೊಳಗಾಗಿ ಮೃತಪಟ್ಟಿದ್ದರು. ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬರುತ್ತಿದ್ದಂತೆಯೇ ಸುಶೀಲ್ ಕುಮಾರ್ ಪರಾರಿಯಾಗಿದ್ದಾರೆ. ದೆಹಲಿ ನ್ಯಾಯಾಲಯವು ಸುಶೀಲ್ ಕುಮಾರ್, ಇವರ ಸ್ನೇಹಿತ ಅಜಯ್ ಕುಮಾರ್ ಸೇರಿದಂತೆ ಆರು ಮಂದಿ ಆರೋಪಿಗಳಿಗೆ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ.
ಬಹುಮಾನ ಘೋಷಣೆ
ಸುಶೀಲ್ ಬಂಧನಕ್ಕೆ ದೆಹಲಿ ಪೊಲೀಸರು ಹರಸಾಹಸ ನಡೆಸುತ್ತಿದ್ದು, ಅವರಿರುವ ಸ್ಥಳದ ಬಗ್ಗೆ ನಿಖರ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಹಾಗೂ ಅಜಯ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.