ತೆಂಕಸಿ(ತಮಿಳುನಾಡು): ಚಲಿಸುತ್ತಿದ್ದ ಬಸ್ನಿಂದ ಆಯಾ ತಪ್ಪಿ ಕೆಳಗೆ ಬಿದ್ದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತೆಂಕಸಿ ಜಿಲ್ಲೆಯಲ್ಲಿ ನಡೆದಿದೆ. ದುರಂತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಮೈ ಜುಂ ಎನಿಸುವಂತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಮೃತ ಮಹಿಳೆಯನ್ನು ಮಹೇಶ್ವರಿ ಎಂದು ಗುರುತಿಸಲಾಗಿದ್ದು, ಶಂಕರನ್ ಕೋವಿಲ್ ಪ್ರದೇಶದವರು ಎನ್ನಲಾಗಿದೆ. ತಮ್ಮ ಮಗಳ ಮದುವೆಗೆ ಶಾಪಿಂಗ್‌ಗೆ ಹೋಗಿದ್ದ ಮಹಿಳೆ ಖಾಸಗಿ ಮಿನಿ ಬಸ್ ಮೂಲಕ ತಮ್ಮ ಊರಿಗೆ ವಾಪಸ್ ಬರುತ್ತಿದ್ದರು. ತಮ್ಮ ಊರಿನ ಬಸ್ ನಿಲ್ದಾಣ ಸಮೀಪ ಬರುತ್ತಿದ್ದಂತೆ ಸೀಟಿನಿಂದ ಎದ್ದು ಇನ್ನೇನು ಬಸ್ ಬಾಗಿಲಿಗೆ ಬರಬೇಕು ಎನ್ನುವಷ್ಟರಲ್ಲಿ ಬಸ್ ಚಾಲಕ ಹಠಾತ್ತನೆ ಬ್ರೇಕ್ ಹಾಕಿದ ಪರಿಣಾಮ ಆಯಾ ತಪ್ಪಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಬಿದ್ದ ರಭಸಕ್ಕೆ ಆಕೆಯ ತಲೆಯಲ್ಲಿ ತೀವ್ರ ಗಾಯಗಳಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಮಹೇಶ್ವರಿ ಬದುಕುಳಿಯಲಿಲ್ಲ. ಚಾಲಕ ಮತ್ತು ಬಸ್ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.