ಪಾಟ್ನಾ(ಬಿಹಾರ) : ಬಿಹಾರದ ಮಾಧೇಪುರ ಜಿಲ್ಲೆಯ ವೃದ್ದನೊರ್ವ 11 ಬಾರಿ ಕೋವಿಡ್ ಲಸಿಕೆ ಪಡೆದು 12ನೇ ಬಾರಿ ವ್ಯಾಕ್ಸಿನ್ ಪಡೆಯಲು ಹೋಗಿ ತಗ್ಲಾಕೊಂಡಿದ್ದ ಪ್ರಕರಣ ದೇಶದಲ್ಲಿ ಭಾರಿ ಸುದ್ದಿಯಾಗಿತ್ತು. ಆದರೆ, ಇದೇ ರಾಜ್ಯದಲ್ಲಿ ವೈದ್ಯರೊಬ್ಬರು ಐದು ಬಾರಿ ಕೋವಿಡ್ ಲಸಿಕೆ ಪಡೆದಿರುವುದು ಬೆಳಕಿಗೆ ಬಂದಿದೆ.
ಸಿವಿಲ್ ಸರ್ಜನ್ ಡಾ.ವಿಭಾ ಕುಮಾರಿ ಸಿಂಗ್ ಎಂಬುವರು ಐದು ಬಾರಿ ಲಸಿಕೆ ಪಡೆದಿರುವುದು ದಾಖಲೆಗಳಿಂದ ಬೆಳಕಿಗೆ ಬಂದಿದೆ. ಈ ಘಟನೆ ಸಂಬಂಧ ಬಿಹಾರ ಸರ್ಕಾರ ತನಿಖೆಗೆ ಆದೇಶಿದೆ.
CoWIN ಪೋರ್ಟಲ್ ಪ್ರಕಾರ, ಡಾ.ವಿಭಾ ಕುಮಾರಿ ಸಿಂಗ್ 2021 ಜ.28 ರಂದು ಮೊದಲ ಡೋಸ್ ಪಡೆದರೆ, ಕಳೆದ ವರ್ಷದ ಮಾರ್ಚ್‌ನಲ್ಲಿ ಎರಡನೇ ಡೋಸ್ ಪಡೆದಿದ್ದಾರೆ.
ಆದರೆ, 2021ರ ಫೆ.6ರಂದು ಈಕೆ ತನ್ನ ಪ್ಯಾನ್ ಕಾರ್ಡ್ ಮಾಹಿತಿಯನ್ನು ಬಳಸಿಕೊಂಡು ಮತ್ತೊಂದು ಡೋಸ್, ಜೂನ್ 17 ರಂದು ನಾಲ್ಕನೇ ಬಾರಿಗೆ, ಆ ನಂತರ ಅವರು 2022ರ ಜ.13 ರಂದು ಮುನ್ನೆಚ್ಚರಿಕೆಯ ಡೋಸ್ ಪಡೆದಿರುವುದಾಗಿ ಸರ್ಕಾರಿ ದಾಖಲೆಗಳಲ್ಲಿ ಇದೆ.
ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ಹೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದಾಗಿ ಅವರು ಸ್ಪಪ್ಟಪಡಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಮಾಧೇಪುರ ಜಿಲ್ಲೆಯ ವೃದ್ದನೊರ್ವ 11 ಬಾರಿ ಕೋವಿಡ್ ಲಸಿಕೆ ಪಡೆದಿದ್ದ. ಬೆನ್ನು ನೋವನ್ನು ನಿವಾರಿಸಲು ಇದು ಸಹಾಯ ಮಾಡಿದೆ. ಹೀಗಾಗಿಯೇ, ಲಸಿಕೆ ಪಡೆದಿರುವುದಾಗಿ ಹೇಳಿದ್ದ. ಈತನ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ: 11 ಬಾರಿ ಕೋವಿಡ್ ಲಸಿಕೆ ಪಡೆದ ವೃದ್ಧನ ವಿರುದ್ಧ ಎಫ್ಐಆರ್ ದಾಖಲು