ಜಮ್ಮು-ಕಾಶ್ಮೀರ: ಜನವರಿ 26 ರಂದು ನಡೆದ ಕೆಂಪು ಕೋಟೆ ಹಿಂಸಾಚಾರ ಪ್ರಕರಣ ಸಂಬಂಧ ಇದೀಗ ಇಬ್ಬರು ಪ್ರಮುಖ ಆರೋಪಿಗಳನ್ನು ಜಮ್ಮುವಿನಲ್ಲಿ ದೆಹಲಿ ಪೊಲೀಸ್ ಅಪರಾಧ ವಿಭಾಗ ಬಂಧಿಸಿದೆ.
ಜಮ್ಮು ಮತ್ತು ಕಾಶ್ಮೀರದ ಯುನೈಟೆಡ್ ಕಿಸಾನ್ ಫ್ರಂಟ್ ಅಧ್ಯಕ್ಷ ಮೋಹಿಂದರ್ ಸಿಂಗ್ (45 ಮತ್ತು ಜಮ್ಮುವಿನ ಗೋಲ್ ಗುಜ್ರಾಲ್ ನಿವಾಸಿ ಮಂದೀಪ್ ಸಿಂಗ್ (23) ಬಂಧಿತ ಆರೋಪಿಗಳು. ಇವರು ಹಿಂಸಾಚಾರದ ಇಬ್ಬರು ಪ್ರಮುಖ 'ಸಂಚುಕೋರರು' ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ರಾತ್ರಿಯೇ ಇವರನ್ನು ದೆಹಲಿ ಪೊಲೀಸ್ ಅಪರಾಧ ವಿಭಾಗ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದು, ಇಂದು ಬಂಧಿಸಿದೆ. ಮೋಹಿಂದರ್ ಸಿಂಗ್ ಅಮಾಯಕರು. ಘಟನೆ ವೇಳೆ ಅವರು ದೆಹಲಿ ಗಡಿಯಲ್ಲಿದ್ದರು, ಕೆಂಪು ಕೋಟೆ ಬಳಿ ಇರಲಿಲ್ಲ. ಅವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಮೋಹಿಂದರ್ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಗಣರಾಜ್ಯೋತ್ಸವ ದಿನ ರೆಡ್ ಫೋರ್ಟ್ ಮೇಲೆ ಧ್ವಜ ಹಾರಿಸಿದ ಜಸ್ಪ್ರೀತ್ ಸಿಂಗ್ ಅರೆಸ್ಟ್!
ಗಣರಾಜ್ಯೋತ್ಸವ ದಿನದಂದು ನಡೆದಿದ್ದ ಟ್ರ್ಯಾಕ್ಟರ್ ರ‍್ಯಾಲಿ ಹಿಂಸಾತ್ಮಕ ರೂಪ ಪಡೆದಿತ್ತು. ಕೆಂಪು ಕೋಟೆಗೆ ಮುತ್ತಿಗೆ ಹಾಕಿದ್ದ ಪ್ರತಿಭಟನಾನಿರತ ರೈತರು, ಕೋಟೆ ಮೇಲೆ ಧ್ವಜ ಹಾರಿಸಿದ್ದರು. ಪರಿಸ್ಥಿತಿ ನಿಯಂತ್ರಿಸುತ್ತಿದ್ದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದರು. ಈ ಹಿಂಸಾಚಾರದಲ್ಲಿ ಸುಮಾರು 394 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು.
ಪ್ರಕರಣ ಸಂಬಂಧ ಈಗಾಗಲೇ ಅನೇಕರನ್ನು ಬಂಧಿಸಿ, ಎಫ್ಐಆರ್ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ನಿನ್ನೆಯಷ್ಟೇ ರೆಡ್ಫೋರ್ಟ್ ಮೇಲೆ ಧ್ವಜ ಹಾರಿಸಿದ್ದ ಜಸ್ಪ್ರೀತ್ ಸಿಂಗ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.