ಚಿಕ್ಕಮಗಳೂರು: ಪೋಕ್ಸೋ ಪ್ರಕರಣದಲ್ಲಿ ಬಂಧಿಸಿ ಠಾಣೆಗೆ ಕರೆತಂದಿದ್ದಾಗ ಆರೋಪಿ ಠಾಣೆಯಿಂದಲೇ ನಾಪತ್ತೆಯಾಗಿದ್ದ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಠಾಣೆಯಲ್ಲಿ ನಡೆದಿದೆ.
ಬಾಳೆಹೊನ್ನೂರು ಸಮೀಪದ ಗ್ರಾಮವೊಂದರಲ್ಲಿ ಯುವಕನೊಬ್ಬ ಅಪ್ರಾಪ್ತೆಯನ್ನು ಬಲವಂತವಾಗಿ ವಾಹನದಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ ಎಂಬ ಆರೋಪ ಕೇಳಿ ಬಂದಿತ್ತು. ಬಾಳೆಹೊನ್ನೂರ ಪೊಲೀಸರು ಆರೋಪಿಯನ್ನ ಬಂಧಿಸಿ ಠಾಣೆಗೆ ಕರೆತಂದಿದ್ದರು. ಆದರೆ, ಆರೋಪಿ ಠಾಣೆಯಿಂದಲೇ ಪರಾರಿಯಾಗಿದ್ದ.
12 ವರ್ಷದ ಬಾಲಕಿ ತನ್ನ ಮನೆಯ ಸಮೀಪದ ಅಂಗಡಿಯಲ್ಲಿ ವಸ್ತುಗಳನ್ನ ಖರೀದಿಸಿ ಮನೆಗೆ ಬರುತ್ತಿದ್ದಾಗ ಆರೋಪಿ ನಿಜಾಮ್ ಗೂಡ್ಸ್ ವಾಹನದಲ್ಲಿ ಬಂದು ಯುವತಿಗೆ ಪ್ರೀತಿಸುವಂತೆ ಒತ್ತಾಯಿಸಿದ್ದಾನೆ. ಯುವತಿ ನಿರಾಕರಿಸಿದಾಗ ಆರೋಪಿ ಆಕೆಯನ್ನು ವಾಹನದೊಳಗೆ ಎಳೆದುಕೊಂಡು ಹೋಗಿದ್ದಾನೆ ಎಂದು ಹೇಳಲಾಗಿದೆ.
ಗ್ರಾಮದಿಂದ ಸುಮಾರು ಐದಾರು ಕಿ.ಮೀ. ದೂರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಾಲಕಿಗೆ ತಮ್ಮ ಧರ್ಮಕ್ಕೆ ಮತಾಂತರವಾದರೆ ನಿನ್ನನ್ನು ಮದುವೆಯಾಗುತ್ತೇನೆ, ಮೊಬೈಲ್ ಕೊಡಿಸುತ್ತೇನೆ ಎಂದು ಒತ್ತಾಯಿಸಿ ಮೈ-ಕೈ ಮುಟ್ಟಿ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾನೆ ಎಂದು ಅಪ್ರಾಪ್ತೆ ಆರೋಪಿಸಿದ್ದಾಳೆ.
ಸ್ಥಳೀಯರಿಂದ ಬಾಲಕಿ ರಕ್ಷಣೆ!
ಬಳಿಕ ಆರೋಪಿಗೆ ಬೈದು ಬಾಲಕಿ ಕೂಗಾಡಿದ ಹಿನ್ನೆಲೆಯಲ್ಲಿ ಆತ ಆಕೆಯನ್ನ ವಾಪಸ್ ಕರೆದುಕೊಂಡು ಬರಲು ಮುಂದಾಗಿದ್ದಾನೆ. ಇದನ್ನು ಗಮನಿಸಿದ ಕೆಲ ಸ್ಥಳೀಯರು ಅನುಮಾನಗೊಂಡು ವಾಹನವನ್ನು ಅಡ್ಡಗಟ್ಟಿ ಯುವತಿಯನ್ನು ರಕ್ಷಿಸಿ ಆಕೆಯ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಬಾಲಕಿ ಬಾಳೆಹೊನ್ನೂರು ಠಾಣೆಯಲ್ಲಿ ಬಲವಂತವಾಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ದೂರು ದಾಖಲಿಸಿದ್ದಳು.
ಪ್ರಕರಣ ಸಂಬಂಧ ಆರೋಪಿಯನ್ನ ಪೊಲೀಸರು ಬಂಧಿಸಿದ್ದರು. ಆದರೆ, ಆತ ಪೊಲೀಸ್ ಠಾಣೆಯಿಂದಲೇ ಪರಾರಿಯಾಗಿದ್ದನು. ಕೂಡಲೇ ಅಲರ್ಟ್ ಆದ ಪೊಲೀಸರು ಬಾಳೆಹೊನ್ನೂರಿನಿಂದ 40 ಕಿ.ಮೀ. ದೂರದ ಕೊಪ್ಪದಲ್ಲಿ ಆರೋಪಿಯನ್ನ ಬಂಧಿಸಿ ಠಾಣೆಗೆ ಕರೆತಂದಿದ್ದಾರೆ.