ರಾಮನಗರ : ಅಂತೂ ಬೊಂಬೆನಾಡು ಚನ್ನಪಟ್ಟಣದಲ್ಲಿ ನಡೆದ ಒಂಟಿ ಮಹಿಳೆ ಮರ್ಡರ್ ಕೇಸನ್ನ ಪೊಲೀಸರು ಭೇದಿಸಿದ್ದಾರೆ. ಗಂಡನ ಸೋದರಳಿಯನೇ ಕಾಮಾಂಧನಾಗಿ ಮಹಿಳೆಯನ್ನು ಕೊಲೆಗೈದು ಪರಾರಿಯಾಗಿದ್ದ. ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ರಾಮನಗರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ತಿಳಿಸಿದ್ದಾರೆ.
ನಗರದ ಮಹದೇಶ್ವರ ನಗರದಲ್ಲಿ ಕಳೆದ ಜುಲೈ15 ರಂದು ಶುಕ್ರವಾರ ಸಂಜೆ 03:45ರ ಸಮಯದಲ್ಲಿ ನಡೆದಿದ್ದ ಕೊಲೆಯನ್ನು ಭೇದಿಸಿದ್ದಾರೆ. ನಗರದ ಸಾತನೂರು ಮುಖ್ಯ ರಸ್ತೆಯ ಮಹದೇಶ್ವರ ನಗರದಲ್ಲಿ ಅನ್ನಪೂರ್ಣೇಶ್ವರಿ ಬಾರ್ ಹಿಂಭಾಗದ ರಸ್ತೆಯ ಕೊನೆ ಮನೆಯೊಂದರಲ್ಲಿ ವಾಸವಾಗಿದ್ದ 33 ವಯಸ್ಸಿನ ಮಹಿಳೆಯನ್ನು ಹಾಡಹಗಲೇ ಕೊಲೆ ಮಾಡಿ ಪರಾರಿಯಾಗಿದ್ದನು. ಆರೋಪಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಓಂಪ್ರಕಾಶ್ ನೇತೃತ್ವದಲ್ಲಿ, ಗ್ರಾಮಾಂತರ ವೃತ್ತ ನಿರೀಕ್ಷಕರಾದ ಟಿ ಬಿ ಶಿವಕುಮಾರ್ ಸೇರಿದಂತೆ ನಾಲ್ಕು ತಂಡಗಳನ್ನು ರಚಿಸಿ ಸತತ 25 ದಿನಗಳ ಕಾಲ ನಿರಂತರ ತನಿಖೆ ಕೈಗೊಂಡು ಆರೋಪಿಯನ್ನು ಪತ್ತೆಹಚ್ಚಿದ್ದಾರೆ.
ತನಿಖೆಯನ್ನೇ ದಿಕ್ಕು ತಪ್ಪಿಸಲು ಯತ್ನ : ಜುಲೈ 15 ರಂದು ಮಧ್ಯಾಹ್ನವೇ ಮನೆಯ ಬಳಿ ಬಂದಿದ್ದ ಕೊಲೆಗಾರ ಮಹಿಳೆಯ ಪತಿ ಮನೆಯಿಂದ ಹೊರ ಹೋಗುವ ತನಕ ಮುಖ್ಯ ರಸ್ತೆಯಲ್ಲಿ ಕಾದಿದ್ದ ಆರೋಪಿ ಹೊರ ಹೋದ ನಂತರ ಮನೆಯ ಮುಂದೆ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಬೈಕ್ ನಿಲ್ಲಿಸಿ, ಹೆಲ್ಮೆಟ್ ನ್ನು ಗೇಟಿನ ಒಳಗಿನ ಬಾಗಿಲ ಬಳಿ ಇಟ್ಟು ಒಳಹೋಗಿದ್ದ. ಯಾವಾಗಲೂ ಬಾಗಿಲು ಹಾಕಿಕೊಂಡೇ ಇರುತ್ತಿದ್ದ ಮಹಿಳೆ ಅಂದು ಬಾಗಿಲು ತೆರೆದು, ಆರೋಪಿಯನ್ನ ಒಳಕರೆದು ಕಾಫಿ ಮಾಡಿಕೊಟ್ಟಿದ್ದರು. ಈ ಮೊದಲೇ ಆತನ ಸಂಪರ್ಕದಲ್ಲಿದ್ದ ಆ ಮಹಿಳೆಗೆ ಆತನ ಜೊತೆ ಎಲ್ಲವೂ ನಡೆದಿದೆ. ನಂತರವೇ ಆತ ಕುತ್ತಿಗೆಯನ್ನು ಸೀಳಿ ಕೊಲೆಗೈದಿದ್ದಾನೆ. ಮುಂದಾಲೋಚನೆಯಿಂದಲೇ ಆಗಮಿಸಿದ್ದ ಅವನು, ಕೈಗಳಿಗೆ ಗ್ಲೌಸ್ ಹಾಕಿಕೊಂಡು, ರಕ್ತ ಚಿಮ್ಮಿದರೂ ಗೊತ್ತಾಗದಿರಲೆಂದು ಕೆಂಪು ಬಣ್ಣದ ಅಂಗಿ ಹಾಕಿಕೊಂಡು ಬಂದೇ ಕೊಲೆಗೈದಿದ್ದಾನೆ ಎನ್ನಲಾಗ್ತಿದೆ.
ಇಬ್ಬರಿಗೂ ಲವ್ವಿ-ಡವ್ವಿ ಇತ್ತು : ಯಾವುದೋ ಕೆಟ್ಟ ಘಳಿಗೆಯಲ್ಲಿ, ಆತನ ಬಲವಂತಕ್ಕೆ ಮಣಿದು ಕಳೆದ ಮೂರು ವರ್ಷಗಳಿಂದಲೂ ಇವರಿಬ್ಬರ ಲವ್ವಿ-ಡವ್ವಿ ನಡೆಯುತ್ತಿತ್ತು ಎನ್ನಲಾಗ್ತಿದೆ. ಬೇರೆಯವರಿಗೆ ಇರಲಿ ಕುಟುಂಬದವರಿಗೂ ಇಬ್ಬರ ನಡುವಿನ ಲವ್ವಿ- ಡವ್ವಿ ವಿಷಯ ಗೊತ್ತಾಗದಂತೆ ನೋಡಿಕೊಂಡಿದ್ದರು. ಆ ಮಹಿಳೆ ಸಹ ಗಂಡನ ಮನೆ, ತಾಯಿಯ ಮನೆ ಹಾಗೂ ತಾವು ಇದ್ದ ನಗರದ ಮನೆಯ ಅಕ್ಕಪಕ್ಕದಲ್ಲೂ ಕೆಟ್ಟ ಹೆಸರು ಬಾರದ ಹಾಗೆ ನೋಡಿಕೊಂಡಿದ್ದರಂತೆ. ಕಾಮಕ್ಕೆ ಕಣ್ಣಿಲ್ಲ ಎಂಬ ಗಾದೆಯಂತೆ ಆರಂಭವಾದ ಇವರ ಲವ್ವಿ-ಡವ್ವಿಗೆ ಆ ಮಹಿಳೆ ಬಲವಂತವಾಗಿ ಮಣಿದಿದ್ದರು. ಇಬ್ಬರ ನಡುವೆ ವೈಮನಸ್ಸು ಉಂಟಾದ ಹಿನ್ನೆಲೆಯಲ್ಲಿ ಈತ ಆ ಗೃಹಿಣಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಕೊಲೆಗಾರ ಅಜಯ್ ಯಾರು ಗೊತ್ತಾ : ತೀಕ್ಷ್ಣ ಕೊಲೆಗಾರ ಅಜಯ್ (24) ಕೊಲೆಗೀಡಾದವಳ ಪತಿಯ ಖಾಸಾ ಅಕ್ಕನ ಮಗ. ಈ ಮಹಿಳೆಯ ಗಂಡನಿಗೆ ಮೂವರು ಸಹೋದರಿಯರು. ಹಲಗೂರು ಸಮೀಪದ ದಳವಾಯಿ ಕೋಡಿಹಳ್ಳಿ ಗ್ರಾಮಕ್ಕೆ ಮದುವೆಯಾಗಿದ್ದ ಸಹೋದರಿಯ ಮಗನೇ ಈ ಕಿರಾತಕ ಅಜಯ್. ಸಂಬಂಧದಲ್ಲಿ ಸಹೋದರನಾಗಬೇಕಿದ್ದ ಈತ ಕಾಮಕ್ಕೆ ಕಣ್ಣಿಲ್ಲಾ ಎಂಬ ಗಾದೆಯನ್ನು ನಿಜವಾಗಿಸಿಬಿಟ್ಟ. ಬಂದು ಹೋಗುವ ಬಂಧುವಾಗದೆ ಹಂತಕನಾಗಿದ್ದಾನೆ. ಬೆಂಗಳೂರಿನಲ್ಲೂ ಸಹ ಈತ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ಪೋಲಿಸರು ತನಿಖೆ ನಡೆಸುತ್ತಿದ್ದಾರೆ.
ಕೊಲೆ ಮುಚ್ಚಿ ಹಾಕಲು ಶತ ಪ್ರಯತ್ನ : ಕೊಲೆ ಮಾಡಿದ ನಂತರ ಆತ ಮಹಿಳೆಯ ಮಾಂಗಲ್ಯ ಸರ ಮತ್ತು ಮೊಬೈಲ್ ತೆಗೆದುಕೊಂಡು ಹೋಗಿದ್ದ. ಪೊಲೀಸರ ದಿಕ್ಕು ತಪ್ಪಿಸಲು ಬೀರುಗಳನ್ನು ತಡಕಾಡಿದಂತೆ ಮಾಡಿ ಬಟ್ಟೆಗಳನ್ನು ಚಲ್ಲಿ, ಹಣ ಮತ್ತು ಇದ್ದ ಒಡವೆಗಳನ್ನು ದೋಚದೇ ಹೋಗಿದ್ದ. ಆಕೆಯ ಮೊಬೈಲ್ ಫೋನ್ನ್ನು ಹೊಂಗನೂರು ಕೆರೆಗೆ ಎಸೆದು ಹೋಗಿದ್ದ. ಆದರೆ ಆತ ಮತ್ತೊಂದು ಎಡವಟ್ಟು ಮಾಡಿದ್ದೆಂದರೆ ಮಾಂಗಲ್ಯ ಸರವನ್ನು ಹಲಗೂರು ಗ್ರಾಮದ ಗಿರವಿ ಅಂಗಡಿಯೊಂದರಲ್ಲಿ ಗಿರವಿ ಇಟ್ಟಿದ್ದ. ಅದೇ ಆತ ಸಿಕ್ಕಿಹಾಕಿಕೊಳ್ಳಲು ಕಾರಣವಾಗಿತ್ತು. ಜೊತೆಗೆ ಆತನ ಪ್ರಿಯತಮೆಯ ಜೊತೆ ಮಾತನಾಡದೆ ಸತತ ಮೂರು ಗಂಟೆಗಳಿಗೂ ಅಧಿಕ ಸಮಯ ಮೊಬೈಲ್ ಚಾಲನೆಯಲ್ಲಿದ್ದದ್ದು ಪೊಲೀಸರ ತನಿಖೆಗೆ ನೆರವಾಗಿತ್ತು.
ಇದನ್ನೂ ಓದಿ : ಡ್ರಗ್ಸ್ ನಶೆಯಲ್ಲಿ ತಲೆಯ ಮೇಲೆ ಮೂತ್ರ ವಿಸರ್ಜಿಸಿದ ಪತಿ.. ಠಾಣೆ ಮೆಟ್ಟಿಲೇರಿದ ಪತ್ನಿ