ಮಂಗಳೂರು : ಪಾಸ್ಪೋರ್ಟ್ ಅವಧಿ ಮುಗಿದರೂ ಅನಧಿಕೃತವಾಗಿ ವಾಸ ಮಾಡುತ್ತಿದ್ದ ಒಮನ್ ಪ್ರಜೆಯನ್ನು ಬಂಧಿಸಲಾಗಿದ್ದು, ಈ ವೇಳೆ ಈತನ ಬಳಿ ಇದ್ದ ಗಾಂಜಾ, ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ಎಂಡಿಎಂಎ ಮತ್ತು ಗಾಂಜಾ ಹೊಂದಿದ್ದ ಈತನ ಜೊತೆಗಿದ್ದ ಮತ್ತೊಬ್ಬನನ್ನು ಕೂಡ ಬಂಧಿಸಲಾಗಿದೆ.
ಒಮನ್ ದೇಶದ ಅಹಮದ್ ಮುಹಮದ್ ಮೂಸಬ್ಬ ಅಲ್ ಮಹಮದಿ (34) ಮತ್ತು ಹಿಮಾಚಲ ಪ್ರದೇಶದ ರಾಮ್ ಬಂಧಿತರು. ಇವರ ಬಳಿಯಿಂದ 51 ಗ್ರಾಂ ಗಾಂಜಾ ಮತ್ತು 2 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಒಮನ್ ಪ್ರಜೆ ಆರು ತಿಂಗಳ ಹಿಂದೆ ಟೂರಿಸ್ಟ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದ. ಗೋವಾದಲ್ಲಿದ್ದ ಈತ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಂದಿದ್ದ ಎಂದು ತಿಳಿದು ಬಂದಿದೆ.
ಈತ ಚಿಕಿತ್ಸೆ ಬಳಿಕ ಮಂಗಳೂರಿನ ಗೋಲ್ಡನ್ ಪ್ಲಾಜಾ ಹೋಟೆಲ್ನಲ್ಲಿ ತಂಗಿದ್ದು, ಈತನಿಗೆ ಹಿಮಾಚಲಪ್ರದೇಶದ ರಾಮ್ ಜೊತೆಯಾಗಿದ್ದಾನೆ. ಪೊಲೀಸರ ತಪಾಸಣೆ ವೇಳೆ ಇವರಿಬ್ಬರ ಬಳಿ ಎಂಡಿಎಂಎ ಮತ್ತು ಗಾಂಜಾ ಸಿಕ್ಕಿದೆ. ಇವರಿಬ್ಬರ ವಿರುದ್ದ ಎನ್ಡಿಪಿಎಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಲಾಗಿದೆ.
ಒಮನ್ ಪ್ರಜೆಯ ಪಾಸ್ಪೋರ್ಟ್ ವ್ಯಾಲಿಡಿಟಿ ಮೇ 31ಕ್ಕೆ ಮುಗಿದಿದ್ದು, ಈ ಹಿನ್ನೆಲೆ ಆತನ ವಿರುದ್ಧ ಪಾಸ್ಪೋರ್ಟ್ ಆ್ಯಕ್ಟ್ ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿದೆ. ಇವರ ಬಳಿ ಗಾಂಜಾ ಬಂದದ್ದು ಎಲ್ಲಿಂದ, ಮಾರಾಟ ಮಾಡುತ್ತಿದ್ದರೆ? ಸೇವನೆ ಮಾಡುತ್ತಿದ್ದರೆ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.