ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ತುಂಬಿದ್ದ ಕಾರು ಪತ್ತೆ ಪ್ರಕರಣ ಸಂಬಂಧ ಇದೀಗ ಓರ್ವ ಶಂಕಿತನನ್ನು ಮುಂಬೈ ಅಪರಾಧ ವಿಭಾಗ ಪೊಲೀಸರು ಗುರುತಿಸಿದ್ದಾರೆ.
ಗುರುವಾರ ಮುಂಬೈನಲ್ಲಿರುವ ಮುಖೇಶ್ ಅಂಬಾನಿ ನಿವಾಸ ಆಂಟಿಲಿಯಾ ಬಳಿ 21 ಜಿಲೆಟಿನ್ ಕಡ್ಡಿಗಳನ್ನು ತುಂಬಿದ್ದ ಸ್ಕಾರ್ಪಿಯೋ ಕಾರು ಪತ್ತೆಯಾಗಿತ್ತು. ಪ್ರಕರಣ ಸಂಬಂಧ ತನಿಖೆ ನಡೆಸಲು 10 ತಂಡಗಳನ್ನು ರಚನೆ ಮಾಡಲಾಗಿದ್ದು, ಮುಂಬೈ ಕ್ರೈಂ ಬ್ರ್ಯಾಂಚ್ ಹಾಗೂ ಎಟಿಎಸ್ ಜಂಟಿಯಾಗಿ ತನಿಖೆ ನಡೆಸುತ್ತಿವೆ.
ಇದನ್ನೂ ಓದಿ: ಅಂಬಾನಿ ನಿವಾಸದ ಬಳಿ ಜಿಲೆಟಿನ್ ಇರಿಸಿದ ಕಾರು ನಿಲ್ಲಿಸುತ್ತಿರುವ ಸಿಸಿಟಿವಿ ವಿಡಿಯೋ!
ಕಾರನ್ನು ಪಾರ್ಕ್ ಮಾಡಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದೀಗ ಮನೆಯ ಮುಂದೆ ಸ್ಕಾರ್ಪಿಯೋ ಕಾರು ನಿಲ್ಲಿಸಿದ್ದ ವ್ಯಕ್ತಿಯ ಗುರುತನ್ನು ಮುಂಬೈ ಅಪರಾಧ ವಿಭಾಗ ಪೊಲೀಸರು ಪತ್ತೆ ಹೆಚ್ಚಿದ್ದಾರೆ. ಸ್ಕಾರ್ಪಿಯೋ ಕಾರಿನ ಹಿಂದೆ ಬಿಳಿ ಬಣ್ಣದ ಇನೋವಾ ಕಾರು ಕೂಡ ಕಂಡು ಬಂದಿದ್ದು, ಇದರ ಸುಳಿವಿನ ಆಧಾರದ ಮೇಲೆ ಪ್ರಮುಖ ಆರೋಪಿಯನ್ನು ಪೊಲೀಸರು ಶೀಘ್ರದಲ್ಲೇ ಬಂಧಿಸಲಿದ್ದಾರೆ ಎಂದು ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.