ಗಂಗಾವತಿ: ಪ್ರತಿಷ್ಠಿತ ಮನೆತನಕ್ಕೆ ಸೇರಿದ ವೃದ್ಧೆಯೊಬ್ಬರು ಇತ್ತೀಚೆಗೆ ಸಾವನ್ನಪ್ಪಿದ್ದು, ಸಾವಿನ ಬಗ್ಗೆ ಅನುಮಾನಗೊಂಡ ಪೊಲೀಸರು ಕಳೇಬರ ಹೊರ ತೆಗೆದು ಮಹಜರು ನಡೆಸಿದ ಘಟನೆ ನಗರದಲ್ಲಿ ನಡೆದಿದೆ.
ಇದನ್ನೂ ಓದಿ: ಬಡವ್ರಿಗೆ ಉಪಯೋಗವಾಗುತ್ತೋ 10 ಎಕರೆ ನಾನೇ ಬಿಟ್ಟುಕೊಡ್ತೀನಿ: ಜಮೀನು ವಿವಾದ ವಿಚಾರವಾಗಿ ಯಶ್ ಹೇಳಿಕೆ
ಗಂಗಾವತಿ ಪುರಸಭೆ ಮಾಜಿ ಅಧ್ಯಕ್ಷ ಅಮರಜ್ಯೋತಿ ದುರುಗಪ್ಪ ಎಂಬುವರ ಪತ್ನಿ ಶಿವಮ್ಮ, ಮಾರ್ಚ್ 5ರಂದು ಸಾವನ್ನಪ್ಪಿದ್ದರು. ಸಹಜವಾಗಿ ಸಾವನ್ನಪ್ಪಿದ್ದಾರೆ ಎಂದು ಭಾವಿಸಿದ್ದ ಕುಟುಂಬಸ್ಥರು ವಿದ್ಯಾನಗರದ ರೈಲ್ವೆ ಸಿಬ್ಬಂದಿ ವಸತಿ ಗೃಹದ ತಮ್ಮ ಜಮೀನಿನ ಬಳಿ ಮೃತರ ಅಂತ್ಯಕ್ರಿಯೆ ನೆರವೇರಿಸಿದ್ದರು.
ಆದರೆ ಮೃತರ ಮನೆಯಲ್ಲಿನ ಅರ್ಚಕ ಹಾಗೂ ಮನೆಯ ಸಹಾಯಕ ಸೇರಿ, ಮನೆಯಲ್ಲಿ ಕಳ್ಳತನ ಮಾಡುವ ಸಂದರ್ಭದಲ್ಲಿ ವೃದ್ಧೆ ಗಮನಿಸಿದ್ದಾರೆ. ಈ ವೇಳೆ ಆಕೆಗೆ ಬಾತ್ ರೂಂ ಕ್ಲೀನ್ ಮಾಡುವ ಬ್ರಷ್ ಹಿಡಿಕೆಯಿಂದ ತಲೆಗೆ ಬಲವಾಗಿ ಹೊಡೆದಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಅನುಮಾನಗೊಂಡ ಮನೆಯವರು, ಅರ್ಚಕ ಸರ್ವಜ್ಞ ಹಾಗೂ ಮನೆಯ ಸಹಾಯಕ ಗಣೇಶ ಎಂಬುವವರ ಮೇಲೆ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣದ ವಾಸ್ತವ ಬಯಲಿಗೆ ಬಂದಿದೆ.
ಆದರೆ ಪ್ರಕರಣ ದಾಖಲಾಗುವ ಹೊತ್ತಿಗೆ ಮೃತರ ಅಂತ್ಯಸಂಸ್ಕಾರ ನೆರವೇರಿದೆ. ಈ ಹಿನ್ನೆಲೆಯಲ್ಲಿ ಇದೀಗ ಪೊಲೀಸರು ಹೂಳಲಾಗಿದ್ದ ಶವ ಹೊರ ತೆಗೆದು ವಿಧಿವಿಜ್ಞಾನದ ತಜ್ಞ ವಿನೋದ್ ಎಂಬುವವರ ನೇತೃತ್ವದಲ್ಲಿ ಶವಪರೀಕ್ಷೆ ನಡೆಸಿ ಸ್ಯಾಂಪಲ್ ಸಂಗ್ರಹಿಸಿದರು.