ನವದೆಹಲಿ: ರಾಷ್ಟ್ರೀಯ ತನಿಖಾ ದಳ ಎನ್ಐಎ ಸೋಮವಾರ ಪಂಜಾಬ್, ಹರಿಯಾಣ, ರಾಜಸ್ಥಾನ, ರಾಷ್ಟ್ರೀಯ ರಾಜಧಾನಿ ಪ್ರದೇಶ ಎನ್‌ಸಿಆರ್ 50 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿತು. ಭಯೋತ್ಪಾದಕರು, ದರೋಡೆಕೋರರು, ಮಾದಕವಸ್ತು ಕಳ್ಳಸಾಗಣೆದಾರರು, ಭಾರತ ಮತ್ತು ವಿದೇಶಗಳಲ್ಲಿ ನೆಲೆಸಿರುವ ಕಳ್ಳಸಾಗಣೆದಾರರ ಮೇಲೆ ದಿಡೀರ್ ದಾಳಿ ನಡೆಸಿತು.
ಅಂತಾರಾಷ್ಟ್ರೀಯ ಭಯೋತ್ಪಾದನೆ ಮತ್ತು ಅಪರಾಧ ಜಾಲವನ್ನು ಭೇದಿಸಲು ಎನ್ಐಎ ತೀವ್ರ ಪ್ರಯತ್ನ ಮಾಡುತ್ತಿದೆ. ಫಾಜಿಲ್ಕಾ, ಫರೀದ್‌ಕೋಟ್, ಮುಕ್ತಸರ್ ಸಾಹಿಬ್, ಮೋಗಾ, ತರ್ನ್ ತರಣ್, ಅಮೃತಸರ, ಲುಧಿಯಾನ, ಚಂಡೀಗಢ, ಪಂಜಾಬ್‌ನ ಮೊಹಾಲಿ ಜಿಲ್ಲೆಗಳು, ಪೂರ್ವ ಗುರುಗ್ರಾಮ್, ಭಿವಾನಿ, ಯಮುನಾ ನಗರ, ಸೋನಿಪತ್ನಲ್ಲಿ ಎನ್ಐಎ ತಂಡಗಳು ತೀವ್ರ ಶೋಧ ನಡೆಸಿದವು. ಅಷ್ಟೇ ಅಲ್ಲ ಹರಿಯಾಣದ ಜಜ್ಜರ್ ಜಿಲ್ಲೆ, ರಾಜಸ್ಥಾನದ ಹನುಮಾನ್‌ಗಢ ಮತ್ತು ಗಂಗಾನಗರ, ದ್ವಾರಕಾ, ಹೊರ ಉತ್ತರ, ವಾಯುವ್ಯ, ಈಶಾನ್ಯ ಮತ್ತು ದೆಹಲಿ ಹಾಗೂ ಎನ್‌ಸಿಆರ್ ಪ್ರದೇಶದಲ್ಲಿ ಗ್ಯಾಂಗಸ್ಟರ್ಗಳ ಜಾಡು ಹಿಡಿದು ತನಿಖೆ ನಡೆಸಿತು.
ಗೋಲ್ಡಿ ಬ್ರಾರ್ (ಕೆನಡಾ), ಲಾರೆನ್ಸ್ ಬಿಷ್ಣೋಯ್, ಜಗ್ಗು ಭಗವಾನ್ ಪುರಿಯಾ, ವರೀಂದರ್ ಪ್ರತಾಪ್ ಅಲಿಯಾಸ್ ಕಲಾ ರಾಣಾ, ಕಲಾ ಜಥೇದಿ, ವಿಕ್ರಮ್ ಬ್ರಾರ್ ಮತ್ತು ಗೌರವ್ ಪಟ್ಯಾಲ್ ಅಲಿಯಾಸ್ ಲಕ್ಕಿ ಪಟ್ಯಾಲ್ (ಈತ ಈ ಹಿಂದೆ ಅರ್ಮೇನಿಯಾದಲ್ಲಿ ಬಂಧಿತನಾಗಿದ್ದ) ನಿವಾಸಗಳ ಮೇಲೆ ಬೆಳಂ ಬೆಳಗ್ಗೆ ಶೋಧ ನಡೆಸಿತು.
ಇವರಷ್ಟೇ ಅಲ್ಲ ನೀರಜ್ ಬವಾನಾ, ಕೌಶಲ್ ಚೌಧರಿ, ತಿಲ್ಲು ತಾಜ್‌ಪುರಿಯಾ, ಅಮಿತ್ ದಾಗರ್, ದೀಪಕ್ ಕುಮಾರ್ ಅಲಿಯಾಸ್ ಟಿನು, ಸಂದೀಪ್ ಅಲಿಯಾಸ್ ಬಂದರ್, ಉಮೇಶ್ ಅಲಿಯಾಸ್ ಕಲಾ, ಇರ್ಫಾನ್ ಅಲಿಯಾಸ್ ಚೀನು ಪಹಲ್ವಾನ್, ಆಶಿಮ್ ಅಲಿಯಾಸ್ ಹಾಶಿಮ್ ಬಾಬಾ, ಸಚಿನ್ಸೋನಾಟೆಸ್ ಅವರ ಮನೆಗಳ ಮೇಲೂ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದುಕೊಂಡಿತು.
ಶೋಧದ ವೇಳೆ ಸಿಕ್ಕಿದ್ದೇನು?: ಶೋಧದ ವೇಳೆ ಆರು ಪಿಸ್ತೂಲ್‌ಗಳು, ಒಂದು ರಿವಾಲ್ವರ್ ಮತ್ತು ಒಂದು ಶಾಟ್‌ಗನ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇದಲ್ಲದೇ ಎನ್‌ಐಎ ತಂಡಗಳು ಡ್ರಗ್ಸ್, ನಗದು, ದೋಷಾರೋಪಣೆ ದಾಖಲೆಗಳು, ಡಿಜಿಟಲ್ ಸಾಧನಗಳು, ಬೇನಾಮಿ ಆಸ್ತಿ ವಿವರಗಳು ಮತ್ತು ಬೆದರಿಕೆ ಪತ್ರಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿವೆ.
ಈ ಹಿಂದೆ ದೆಹಲಿ ಪೊಲೀಸರು ಮತ್ತು ಎನ್ಐಎ ಆಗಸ್ಟ್ 26 ರಂದು ದಾಖಲಿಸಿದ್ದ ಎರಡು ಪ್ರಕರಣಗಳ ಬಗೆಗಿನ ತನಿಖೆಯನ್ನು ಪ್ರಾರಂಭಿಸಿದ್ದು, ಈ ಭಾಗವಾಗಿಯೇ ಇಷ್ಟೊಂದು ದೊಡ್ಡ ದಾಳಿಯನ್ನು ಕೈಗೊಂಡಿತು. ಈ ಪ್ರಕರಣಗಳಲ್ಲಿ ಭಯೋತ್ಪಾದನೆ ಮತ್ತು ಅಪರಾಧ ಚಟುವಟಿಕೆಗಳನ್ನು ಮುನ್ನಡೆಸುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಯಿತು. ಭಾರತ ಮತ್ತು ವಿದೇಶಗಳಲ್ಲಿ ನೆಲೆಸಿರುವ ಅತ್ಯಂತ ಅಪಾಯಕಾರಿ ಗ್ಯಾಂಗ್ ಮತ್ತು ಅದರ ನಾಯಕರು ಮತ್ತು ಅವರ ಸಹಚರರನ್ನು ಗುರುತಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಎನ್ಐಎ ತಿಳಿಸಿದೆ.
ವ್ಯಾಪಕ ಭಯ ಸೃಷ್ಟಿ ಹಿನ್ನೆಲೆಯಲ್ಲಿ ದಾಳಿ: ಕ್ರಿಮಿನಲ್ ಸಿಂಡಿಕೇಟ್‌ಗಳು ಹಾಗೂ ದರೋಡೆಕೋರರು ಉದ್ಯಮಿಗಳು, ವೈದ್ಯರು ಸೇರಿದಂತೆ ವೃತ್ತಿಪರರನ್ನು ಹೆದರಿ ಅವರಿಂದ ಹಣ ವಸೂಲಿಗೆ ಇಳಿಯುತ್ತಿದ್ದರು. ಇದಕ್ಕಾಗಿ ಗ್ಯಾಂಗ್ಸ್ಟರ್ಗಳು ಸುಲಿಗೆ ಕರೆಗಳನ್ನು ಮಾಡಿ ಜನರಲ್ಲಿ ವ್ಯಾಪಕ ಭಯವನ್ನು ಸೃಷ್ಟಿಸುತ್ತಿದ್ದರು ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ. ಅನೇಕ ಗ್ಯಾಂಗ್ ನಾಯಕರು ಮತ್ತು ಸದಸ್ಯರು ಭಾರತದಿಂದ ಪಲಾಯನ ಮಾಡಿದ್ದಾರೆ ಮತ್ತು ಪಾಕಿಸ್ತಾನ, ಕೆನಡಾ, ಮಲೇಷ್ಯಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ವಿದೇಶಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬುದು ದಾಳಿ ವೇಳೆ ಬಯಲಾಗಿದೆ.
ಇದನ್ನೂ ಓದಿ:ಶಿಬು ಸೊರೇನ್ ವಿರುದ್ಧದ ಲೋಕಪಾಲ್ ವಿಚಾರಣೆಗೆ ದೆಹಲಿ ಹೈಕೋರ್ಟ್ ತಡೆ!