ಮುಂಬೈ(ಮಹಾರಾಷ್ಟ್ರ): ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ್ದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ಮುಂಬೈ ಸ್ಥಳೀಯ ಕೋರ್ಟ್ ವಜಾ ಮಾಡಿದೆ.
ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಹಾಗೂ ಮುನ್ಮುನ್ ಧಮೇಚಾ ಅವರನ್ನು ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ಪಾರ್ಟಿ ಮಾಡಿದ್ದ ಆರೋಪದಲ್ಲಿ ಮಾದಕ ವಸ್ತು ನಿಯಂತ್ರಣ ದಳ (NCB) ದಾಳಿ ಮಾಡಿ ಬಂಧಿಸಿತ್ತು. ಸದ್ಯ ಜಾಮೀನು ನಿರಾಕರಿಸಿರುವ ಹಿನ್ನೆಲೆಯಲ್ಲಿ ಆರ್ಯನ್ ಖಾನ್ ಅವರನ್ನು ಆರ್ಥರ್ ರಸ್ತೆಯಲ್ಲಿರುವ ಜೈಲಿಗೆ ಕಳುಹಿಸಲಾಗಿದೆ.
ಅರ್ಜಿ ವಿಚಾರಣೆ ವೇಳೆ, ಕೋರ್ಟ್‌ಗೆ ಹಾಜರಾಗಿದ್ದ ಆರ್ಯನ್ ಖಾನ್, ನಾನು ಭಾರತೀಯ. ನನ್ನ ಪೋಷಕರು ಭಾರತೀಯರು ಹಾಗೂ ಇಲ್ಲೇ ವಾಸಿಸುತ್ತಿದ್ದೇವೆ. ನನ್ನ ಬಳಿ ಭಾರತದ ಪಾಸ್‌ಪೋರ್ಟ್ ಇದೆ. ಸಂಬಂಧಿತ ಅಧಿಕಾರಿಗಳ ತನಿಖೆಗೆ ಸಹಕಾರ ನೀಡುತ್ತೇನೆ, ನಾನು ದೇಶ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದು ಕೋರ್ಟ್‌ಗೆ ಭಾವನಾತ್ಮಕವಾಗಿ ಹೇಳಿಕೆ ನೀಡಿದ್ದಾರೆ.
ಜಾಮೀನು ವಿಚಾರವಾಗಿ ಕೋರ್ಟ್‌ನಲ್ಲಿ ಆರ್ಯನ್ ಖಾನ್ ಪರ ವಕೀಲ ಹಾಗೂ ಎನ್‌ಸಿಬಿ ಪರ ವಕೀಲರ ನಡುವೆ ಭಾರಿ ವಾದ, ಪ್ರತಿವಾದ ನಡೆಯುತ್ತಿದೆ. ಈ ವೇಳೆ, ಜಾಮೀನಿಗೆ ಎನ್‌ಸಿಬಿ ತೀವ್ರವಾಗಿ ವಿರೋಧಿಸಿದೆ. ವಾದ, ಪ್ರತಿವಾದ ಆಲಿಸಿದ ಬಳಿಕ ಕೋರ್ಟ್ ಜಾಮೀನು ನಿರಾಕರಿಸಿತು.