ನವದೆಹಲಿ: ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಅಮಾನುಷವಾಗಿ ಥಳಿಸಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಮಕ್ಕಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ದೃಶ್ಯಗಳನ್ನು ಆಧರಿಸಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಮಹಿಳಾ ಆಯೋಗವು ಕ್ರೂರ ರೀತಿಯಲ್ಲಿ ವರ್ತಿಸಿರುವ ಮಹಿಳೆಯ ವಿರುದ್ಧ ಎಫ್‌ಐಆರ್ ದಾಖಲಿಸಿ, ಹಲ್ಲೆಗೊಳಗಾದ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸರಿಗೆ ಸೂಚಿಸಿದೆ. ಹಲ್ಲೆಯ ವಿಡಿಯೋವನ್ನು ಮಹಿಳೆಯ ಪತಿಯೇ ದೆಹಲಿ ಮಹಿಳಾ ಆಯೋಗಕ್ಕೆ ನೀಡಿದ್ದಾರೆ.
ಮಕ್ಕಳ ಅಜ್ಜಿ ಸಾಂತ್ವನ ಹೇಳಲು ಪ್ರಯತ್ನಿಸುತ್ತಿದ್ದರೂ ಮಹಿಳೆ ತನ್ನ 8 ವರ್ಷದ ಮಗುವಿಗೆ ಥಳಿಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಮಹಿಳೆಯು ಮಗುವಿಗೆ ಎರಡು ಕೈಗಳಿಂದ ಹೊಡೆಯುತ್ತಿದ್ದಂತೆ ಪುಟ್ಟ ಕಂದಮ್ಮ ನೋವು ತಾಳಲಾರದೆ ಜೋರಾಗಿ ಕೂಗಿಕೊಳ್ಳುತ್ತದೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಮಗು ತನ್ನ ಅಜ್ಜಿಯ ತೊಡೆ ಮೇಲೆ ಮಲಗುತ್ತದೆ. ಆದರೆ ಮಹಿಳೆ ಮಗುವನ್ನು ಆಕೆಯ ಕೈಯಿಂದ ಕಿತ್ತುಕೊಂಡು ಮತ್ತೆ ಹೊಡೆದಿರುವುದು ದೃಶ್ಯದಲ್ಲಿ ಸೆರೆಯಾಗಿದೆ.
8 ವರ್ಷದ ಮಗುವಿನ ಮೇಲಿನ ಈ ಕ್ರೌರ್ಯವನ್ನು ನೋಡಿ ಹೆದರಿದ ಪಕ್ಕದಲ್ಲೇ ಇದ್ದ 2 ವರ್ಷದ ಮಗು ಅಳಲು ಪ್ರಾರಂಭಿಸುತ್ತದೆ. ಆಗ ಆ ಮಗುವನ್ನೂ ಆಕೆ ಬಲವಾಗಿ ಬಡಿಯುತ್ತಾಳೆ. ನಂತರ ಮಗು ಮುಂದೆ ಬೀಳುತ್ತಿದೆ. ಮಹಿಳೆಯ ಪತಿ ಮತ್ತೊಂದು ವಿಡಿಯೋವನ್ನು ನೀಡಿದ್ದು, ಅದರಲ್ಲಿ ಮಹಿಳೆ ತನ್ನ ಅತ್ತೆಯನ್ನು ಅವಾಚ್ಯವಾಗಿ ನಿಂದಿಸಿದ್ದಾಳೆ ಎಂದು ಮಹಿಳಾ ಆಯೋಗ ತಿಳಿಸಿದೆ. ಪತ್ನಿ ಹಲವು ಸಂದರ್ಭಗಳಲ್ಲಿ ನನ್ನ ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ಮಹಿಳೆಯ ಪತಿ ಆರೋಪಿಸಿದ್ದಾರೆ.
ತಮ್ಮ ತಾಯಿ ಆಗಾಗ್ಗೆ ಈ ರೀತಿ ಥಳಿಸುತ್ತಿದ್ದರು. ತಂದೆ ತಮ್ಮ ಮೇಲೆ ಅಥವಾ ತಮ್ಮ ತಾಯಿಯ ಮೇಲೆ ಯಾವತ್ತೂ ಹಲ್ಲೆ ಮಾಡಿಲ್ಲ ಎಂದು ಮಕ್ಕಳು ಡಿಸಿಡಬ್ಲ್ಯು ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಕೂಡಲೇ ಎಫ್‌ಐಆರ್ ದಾಖಲಿಸಿ ಮಹಿಳೆಯನ್ನು ಬಂಧಿಸುವಂತೆ ಡಿಸಿಡಬ್ಲ್ಯು ದೆಹಲಿ ಪೊಲೀಸರಿಗೆ ಸೂಚಿಸಿದೆ. ಮಕ್ಕಳ ಸುರಕ್ಷತೆಗಾಗಿ ಆಯೋಗವು ಮಕ್ಕಳ ಕಲ್ಯಾಣ ಸಮಿತಿಯನ್ನು ಸಂಪರ್ಕಿಸಲಿದ್ದು, ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದೆ.
ಹಲ್ಲೆಯ ದೃಶ್ಯಗಳನ್ನು ನೋಡಿ ತುಂಬಾ ಬೇಸರವಾಗಿದೆ ಎಂದು ಡಿಸಿಡಬ್ಲ್ಯೂ ಅಧ್ಯಕ್ಷೆ ಸ್ವಾತಿ ಮಲಿವಾಲ್ ಹೇಳಿದ್ದಾರೆ. ನಾವು ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಮಹಿಳೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ಮಕ್ಕಳಿಗೆ ಸುರಕ್ಷಿತ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ನಾವು ದೆಹಲಿ ಪೊಲೀಸರನ್ನು ಕೇಳಿದ್ದೇವೆ ಎಂದು ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ನಾವು ಮಹಿಳಾ ಆಯೋಗವಾಗಿರುವುದರಿಂದ ಮಹಿಳೆಯರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರ್ಥವಲ್ಲ. ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.