ಭುವನೇಶ್ವರ (ಒಡಿಶಾ): ಒಂದಲ್ಲ ಎರಡಲ್ಲ ಬರೋಬ್ಬರಿ 16 ಸಾವಿರ ಸಿಮ್ ಕಾರ್ಡ್ ಹಾಗೂ 100ಕ್ಕೂ ಹೆಚ್ಚು ಮೊಬೈಲ್ ಫೋನ್ಗಳನ್ನ ಭುವನೇಶ್ವರ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಇಂತಹ ಅಕ್ರಮ ಗ್ಯಾಂಗ್ ಅನ್ನು ಬಂಧನಕ್ಕೆ ಪಡೆದು ಕಂಬಿ ಹಿಂದೆ ತಳ್ಳಿದ್ದಾರೆ.
ಈ ಎಲ್ಲ ಸಿಮ್ ಕಾರ್ಡ್‌ಗಳು ನಕಲಿ ಗುರುತಿನ ಚೀಟಿ ಕೊಟ್ಟು ನೋಂದಣಿ ಮಾಡಿ ಬೇರೆ ರಾಜ್ಯಗಳಿಗೆ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟೆಲಿಕಾಂ ಕಂಪನಿಯ ಇಬ್ಬರು ಉದ್ಯೋಗಿಗಳು ಸೇರಿದಂತೆ ಒಟ್ಟು ಏಳು ಜನರನ್ನು ಬಂಧಿಸಲಾಗಿದೆ. ಈ ಸಿಮ್ ಕಾರ್ಡ್‌ಗಳನ್ನು ದುಷ್ಕರ್ಮಿಗಳು ಸೈಬರ್ ಅಪರಾಧಕ್ಕಾಗಿ ಬಳಸುತ್ತಿದ್ದರು ಎಂದು ಪೊಲೀಸ್ ಆಯುಕ್ತ ಸೌಮೇಂದ್ರ ಪ್ರಿಯದರ್ಶಿ ಹೇಳಿದ್ದಾರೆ.
ಅಧಿಕಾರಿಗಳು ಈ ಹಿಂದೆ ವಂಚನೆ ಮಾಡಲು ಬಳಸುತ್ತಿದ್ದ ಸಿಮ್ ಕಾರ್ಡ್‌ಗಳು ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಚೀನಾದ ಗುಪ್ತಚರ ಸಂಸ್ಥೆಯ ಗ್ಯಾಂಗ್‌ಗಳು ಖಾತೆಗಳನ್ನು ಹ್ಯಾಕ್ ಮಾಡಲು ಮತ್ತು ಹಣಕಾಸಿನ ವಂಚನೆ ಮಾಡಲು 1,300 ಸಿಮ್ ಕಾರ್ಡ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದವು ಎಂಬ ಮಾಹಿತಿ ಆಧರಿಸಿ, ಭಾರತೀಯ ಏಜೆನ್ಸಿಗಳು ಕಾರ್ಯಾಚರಣೆ ನಡೆಸಿದ್ದವು.