ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ತುಂಬಿದ್ದ ಎಸ್ಯುವಿ ಕಾರು ಪತ್ತೆ ಪ್ರಕರಣ ಸಂಬಂಧ ಇದೀಗ ಮತ್ತೊಂದು ಮಾಹಿತಿ ಬಹಿರಂಗವಾಗಿದೆ.
ಸಾಯುವ ಮುನ್ನ ಸ್ಕಾರ್ಪಿಯೋ ಕಾರು ಮಾಲೀಕ ಮನ್ಸುಖ್ ಹಿರೇನ್, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹಾಗೂ ಗೃಹ ಸಚಿವ ಅನಿಲ್ ದೇಶಮುಖ್ ಬಳಿ ತನಗೆ ಮಾನಸಿಕ ಕಿರುಕುಳ ನೀಡಲಾಗುತ್ತದೆ ಎಂದು ದೂರು ನೀಡಿದ್ದರು. ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಸಲ್ಲಿಸಿದ ದೂರಿನ ಪ್ರತಿಯಲ್ಲಿ ಹಿರಿಯ ಅಧಿಕಾರಿಗಳ ಹೆಸರನ್ನೂ ಉಲ್ಲೇಖಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.
ನಿನ್ನೆ ಮನ್ಸುಖ್ ಮೃತದೇಹ ಥಾಣೆಯಲ್ಲಿ ಪತ್ತೆಯಾಗಿದ್ದು, ಪ್ರಕರಣದ ಸುತ್ತ ಅನೇಕ ಅನುಮಾನಗಳು ಹುಟ್ಟಿಕೊಂಡಿವೆ.
ಇದನ್ನೂ ಓದಿ: ಅಂಬಾನಿ ಮನೆ ಬಳಿ ಸ್ಫೋಟಕವಿದ್ದ ವಾಹನ ಪ್ರಕರಣ: ಕಾರು ಮಾಲೀಕನ ಮೃತದೇಹ ಪತ್ತೆ
ಒಂದು ವಾರದ ಹಿಂದೆ ಮುಂಬೈನಲ್ಲಿರುವ ಮುಖೇಶ್ ಅಂಬಾನಿ ನಿವಾಸ ಆಂಟಿಲಿಯಾ ಬಳಿ 21 ಜಿಲೆಟಿನ್ ಕಡ್ಡಿಗಳನ್ನು ತುಂಬಿದ್ದ ಸ್ಕಾರ್ಪಿಯೋ ಕಾರು ಪತ್ತೆಯಾಗಿತ್ತು. ಪ್ರಕರಣ ಸಂಬಂಧ ತನಿಖೆ ನಡೆಸಲು 10 ತಂಡಗಳನ್ನು ರಚನೆ ಮಾಡಲಾಗಿದ್ದು, ಮುಂಬೈ ಕ್ರೈಂ ಬ್ರ್ಯಾಂಚ್ ಹಾಗೂ ಎಟಿಎಸ್ ಜಂಟಿಯಾಗಿ ತನಿಖೆ ನಡೆಸುತ್ತಿವೆ.