ಚಿಕ್ಕಮಗಳೂರು: ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಮೂಡಿಗೆರೆ ತಾಲೂಕಿನ ಬಾಳೂರಿನ ನಾಗೇಶ್ ಅಚಾರ್(46) ಬಿದಿರು ತಳದ ಅರಣ್ಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಬಿದಿರು ತಳಕ್ಕೆ ಕೆಲಸಕ್ಕೆಂದು ಹೋಗಿದ್ದ ಮೃತ ಅಚಾರ್ ಕೆಲದಿನಗಳಿಂದ ನಾಪತ್ತೆಯಾಗಿದ್ದರು.
ಈ ಬಗ್ಗೆ ನಾಗೇಶ್ ಆಚಾರ್ ಅವರ ಪತ್ನಿ ಸುಮ ಬಾಳೂರು ಪೊಲೀಸ್ ಠಾಣೆಗೆ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ಬಿದಿರು ತಳದಲ್ಲಿ ಕಳೆದ ಎರಡು ದಿನಗಳಿಂದ ಪೊಲೀಸರು, ಅರಣ್ಯ ಅಧಿಕಾರಿಗಳು ಹಾಗೂ 100ಕ್ಕೂ ಹೆಚ್ಚು ಗ್ರಾಮಸ್ಥರು ಹುಡುಕಾಟ ನಡೆಸಿದ್ದರು. ಮೃತದೇಹವನ್ನು ಹೂತು ಹಾಕಿದ್ದು, ವಾಸನೆ ಹಾಗೂ ಹೆಜ್ಜೆ ಗುರುತಿನ ಆಧಾರದಲ್ಲಿ ಶವವನ್ನು ಪತ್ತೆ ಹಚ್ಚಲಾಗಿದೆ.
ಸದ್ಯ ಮೃತದೇಹವನ್ನು ಹಾಸನದ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಬಾಳೂರಿನ ಕೃಷ್ಣೆಗೌಡ, ಪ್ರದೀಪ್, ಉದಯ್ ಎಂಬುವವರು ನನ್ನ ಗಂಡನನ್ನು ಕೊಲೆ ಮಾಡಿದ್ದಾರೆ ಎಂದು ಪತ್ನಿ ಸುಮ ಆರೋಪಿಸಿದ್ದಾರೆ. ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ : ಆರೋಪಿ ಬಂಧನ