ಹಾಸನ: ಪ್ರೀತಿ ನಿರಾಕರಿಸಿದ ಯುವತಿಯನ್ನು ನಡುರಸ್ತೆಯಲ್ಲೇ ಪಾಗಲ್ ಪ್ರೇಮಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಹೇಮಂತ್ (25) ಕೊಲೆ ಮಾಡಿದ ಆರೋಪಿಯಾಗಿದ್ದು, ಸಕಲೇಶಪುರ ತಾಲೂಕಿನ ಬಾಳೆಗದ್ದೆ ಸಮೀಪದ ಸಿದ್ದಾಪುರ ಗ್ರಾಮದ 21 ವರ್ಷದ ಯುವತಿ ಕೊಲೆಯಾದವಳು. ಪ್ರೀತಿ ನಿರಾಕರಣೆಯೇ ಕೊಲೆಗೆ ಕಾರಣ ಎನ್ನಲಾಗ್ತಿದೆ.
ಓದಿ: ಹಸೆಮಣೆ ಏರಬೇಕಿದ್ದ ಹುಡುಗಿ ಮನೆಗೆ ನುಗ್ಗಿದ ಭೂಪ : ಸಿನಿಮೀಯ ರೀತಿ ತಾಳಿ ಕಟ್ಟಿ ನಿಂತಲ್ಲೇ ಹಾರ ಬದಲಾಯಿಸಿದ!
ಕಳೆದ ಮೂರ್ನಾಲ್ಕು ವರ್ಷಗಳಿಂದ ಅದೇ ಗ್ರಾಮದ ಹೇಮಂತ್ ಎಂಬಾತ ಯುವತಿಯನ್ನು ಪ್ರೀತಿಸುತ್ತಿದ್ದ. ವರ್ಷದ ಹಿಂದೆ ಮದುವೆಯಾಗಲು ಆಕೆಗೆ ಮನವಿ ಮಾಡಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲವಂತೆ. ಮತ್ತೆ ಈ ಬಾರಿ ತನ್ನ ಪ್ರೇಮ ನಿವೇದನೆಯನ್ನು ಆಕೆಯೊಂದಿಗೆ ಯುವಕ ತೋಡಿಕೊಂಡಿದ್ದ. ಆದರೂ ಮದುವೆಗೆ ನಿರಾಕರಣೆ ಮಾಡಿದ ಹಿನ್ನೆಲೆ, ಆರೋಪಿ ಹೇಮಂತ್ ಇಂದು ಯುವತಿಯನ್ನು ಕೊಲೆಗೈದಿದ್ದಾನೆ ಎಂದು ತಿಳಿದುಬಂದಿದೆ.
ಮನೆಯಿಂದ ಹೊರಬಂದು ಬೇರೆಡೆಗೆ ತೆರಳುತ್ತಿದ್ದ ಯುವತಿಯನ್ನು ಕಂಡ ಆರೋಪಿ ಹೇಮಂತ್, ಮಾರಕಾಸ್ತ್ರದಿಂದ ಆಕೆಯ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾನೆ. ಏಕಾಏಕಿ ದಾಳಿ ನಡೆದ ಹಿನ್ನೆಲೆ, ಆಕೆ ಸಹಾಯಕ್ಕೆ ಬೇರೆಯವರನ್ನು ಕೂಗಲು ಸಹ ಸಾಧ್ಯವಾಗದೆ ರಕ್ತಸಿಕ್ತವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಘಟನೆ ನಡೆದ ಬಳಿಕ ಆರೋಪಿ ಹೇಮಂತ ತಲೆಮರೆಸಿಕೊಂಡಿದ್ದು, ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲು ಸಿದ್ಧತೆ ಮಾಡಿಕೊಂಡಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಒಟ್ಟಾರೆ ಇಷ್ಟಪಟ್ಟ ಹುಡುಗಿ ಮದುವೆಯಾಗಲು ನಿರಾಕರಣೆ ಮಾಡಿದಳು ಅನ್ನೋ ಒಂದೇ ಕಾರಣಕ್ಕೆ ಆಕೆಯನ್ನು ಬರ್ಬರವಾಗಿ ಕೊಲೆಗೈದು ತಾನು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಆದರೆ ನಾಪತ್ತೆಯಾಗಿರುವ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಅಥವಾ ತಲೆಮರೆಸಿಕೊಂಡಿದ್ದಾನೋ ಎಂಬುದು ಇನ್ನು ನಿಗೂಢವಾಗಿದೆ.
ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.