ಬೊಕಾರೊ: ವಿಧವೆ ಮಹಿಳೆಯೊಬ್ಬಳನ್ನು ಗ್ರಾಮದ ಪಂಚರ ಪಂಚಾಯಿತಿ ನಿರ್ಧಾರದಂತೆ ಬಲವಂತವಾಗಿ ಮನೆಯಿಂದ ಹೊರಹಾಕಿರುವ ಘಟನೆ ಇಲ್ಲಿಗೆ ಸಮೀಪದ ಮಾರಾಫಾರಿ ಠಾಣೆ ವ್ಯಾಪ್ತಿಯ ಬಾಸಗೋಡಾ ಗ್ರಾಮದಲ್ಲಿ ನಡೆದಿದೆ. ಸಂತ್ರಸ್ತ ಮಹಿಳೆ ಫೂಲಮತಿ ಈ ಕುರಿತು ಡಿಸಿ, ಎಸ್ಪಿ ಹಾಗೂ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಈಕೆಯ ಕುಟುಂಬದಲ್ಲಿ ಲವ್ ಮ್ಯಾರೇಜ್ ನಡೆದಿದ್ದರಿಂದಲೇ ಆಕೆಗೆ ಈ ಶಿಕ್ಷೆ ವಿಧಿಸಲಾಗಿದೆ.
ಸಂತ್ರಸ್ತ ಮಹಿಳೆ ಕಕುವಾಟಾಂಡ ಗ್ರಾಮದ ನಿವಾಸಿಗಳಾದ ಪುತಲಿ ದೇವಿ ಹಾಗೂ ಆಕೆಯ ಮಗ ರಾಜು ಮಾರ್ಡಿ ಎಂಬುವರು ತನ್ನನ್ನು ಬಲವಂತವಾಗಿ ಮನೆಯಿಂದ ಹೊರದಬ್ಬಿ ಮನೆಗೆ ಬೀಗ ಹಾಕಿದ್ದಾರೆ ಎಂದು ಆರೋಪಿಸಿದ್ದಾಳೆ.
ಮೇ 22 ರ ಬೆಳಗ್ಗೆ ಪುತಲಿ ಮತ್ತು ಆಕೆಯ ಪುತ್ರ ರಾಜು ಮನೆಗೆ ಬಂದು ಮನೆಯಲ್ಲಿನ ಸಾಮಾನುಗಳನ್ನು ಹೊರಗೆ ಎಸೆದು, ಮಹಿಳೆಯನ್ನು ಆಚೆಗೆ ನೂಕಿ ಮನೆಗೆ ಬೀಗ ಹಾಕಿದ್ದಾರೆ. ಅಲ್ಲದೆ ಮಹಿಳೆಗೆ ಹೊಡೆದು ಬಲವಂತವಾಗಿ ಕೆಲ ಕಾಗದಗಳ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ. ಮಹಿಳೆಯ ಮನೆಯಲ್ಲಿ ಪ್ರೇಮ ವಿವಾಹವಾದ ನಂತರ ಹಣ ಕೊಡಲಿಲ್ಲವೆಂದು ಹೀಗೆ ದೌರ್ಜನ್ಯ ಎಸಗಲಾಗಿದೆ. ಈಗ ಈ ಮಹಿಳೆ ತನ್ನ ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಮೊಮ್ಮಕ್ಕಳೊಂದಿಗೆ ರಸ್ತೆಯಲ್ಲೇ ವಾಸಿಸುವಂತಾಗಿದೆ.
ಯಾರ ಮನೆಯಲ್ಲಿ ಪ್ರೇಮ ವಿವಾಹ ನಡೆಯುತ್ತದೆಯೋ ಆ ಮನೆಯವರು ಪಂಚಾಯಿತಿಗೆ ಒಂದು ಲಕ್ಷ ರೂಪಾಯಿ ದಂಡ ಕಟ್ಟಬೇಕು ಹಾಗೂ ಊರಿನ ಜನರಿಗೆಲ್ಲ ಊಟ ಹಾಕಿಸಬೇಕೆಂಬ ನಿಯಮವಿದೆಯಂತೆ. ಸಂತ್ರಸ್ತ ಮಹಿಳೆಯ ಮಗನೊಬ್ಬ ಪ್ರೇಮ ವಿವಾಹ ಮಾಡಿಕೊಂಡಿದ್ದನಂತೆ. ಹೀಗಾಗಿ ಮಹಿಳೆಯು 10 ಸಾವಿರ ರೂಪಾಯಿ ದಂಡ ಕಟ್ಟಿ, ಊಟ ಹಾಕಿಸಿದ್ದಳಂತೆ. ಆದರೆ ಈಗ ಬಾಕಿ 90 ಸಾವಿರ ರೂಪಾಯಿ ಪಾವತಿಸಬೇಕೆಂದು ಪಂಚಾಯಿತಿ ನಿರ್ಧರಿಸಿ ಆಕೆಯ ಕುಟುಂಬಕ್ಕೆ ಬಹಿಷ್ಕಾರ ಹಾಕಿದೆ. ಅಲ್ಲದೆ ಮಹಿಳೆಯ ಸಹಾಯಕ್ಕೆ ಹೋದರೆ ಅವರನ್ನೂ ಸಮಾಜದಿಂದ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.